
ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಬಿಜೆಪಿ ಮುಖಂಡ ಬಿಎನ್ ಬಚ್ಚೇಗೌಡ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಸದ ವೀರಪ್ಪಮೊಯ್ಲಿ ಅವರಿಗೆ ಸಂಕಷ್ಟವೊಂದು ಎದುರಾಗಿದ್ದು, ಹೈಕೋರ್ಟ್‌ನಲ್ಲಿ ಅವರ ವಿರುದ್ಧ ರಿಟ್ ಅರ್ಜಿ ದಾಖಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರು ನಿಗದಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಪಕ್ಷದ ಮುಖಂಡ ಬಿಎನ್ ಬಚ್ಚೇಗೌಡ ಅವರು ಆರೋಪಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
'ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ 70 ಲಕ್ಷ ರು. ವೆಚ್ಚದ ಮಿತಿ ಇದ್ದರೂ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರು 73 ಲಕ್ಷದ 28 ಸಾವಿರ ರು.ಗಳನ್ನು ಖರ್ಚು ಮಾಡಿದ್ದಾರೆ ಎಂದು ರಿಟ್ ಅರ್ಜಿಯಲ್ಲಿ ಬಚ್ಚೇಗೌಡ ಅವರು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ ಈ ಮೊದಲೇ ಚುನಾವಣಾ ಆಯೋಗಕ್ಕೆ ಬಚ್ಚೇಗೌಡ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೇಲ್ಮನವಿ ಸಲ್ಲಿಸಿದ್ದರಾದರೂ, ಆಯೋಗ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ವೀರಪ್ಪ ಮೊಯ್ಲಿ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಅರ್ಜಿಯಲ್ಲಿ ಬಚ್ಚೇಗೌಡ ಅವರು ಮನವಿ ಮಾಡಿದ್ದಾರೆ.
ಬಚ್ಚೇಗೌಡರ ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯ, ಪ್ರಸ್ತುತ ಚುನಾವಣಾ ಆಯೋಗ, ಮುಖ್ಯಚುನಾವಣಾ ಅಧಿಕಾರಿ ಸೇರಿದಂತೆ ವೀರಪ್ಪಮೊಯ್ಲಿ ಅವರಿಗೆ ವಿವರ ಕೋರಿ ನೋಟಿಸ್ ಜಾರಿ ಮಾಡಿದೆ.
Advertisement