ಕಾಂಗ್ರೆಸ್ ಅಧ್ಯಕ್ಷಗಿರಿ ಹೊಸ ಹೆಸರತ್ತ ಗಿರಕಿ

ಸಚಿವ ಸಂಪುಟ ವಿಸ್ತರಣೆ ಮತ್ತು ಪ್ರದೇಶ ಕಾಂಗ್ರೆಸ್‍ಗೆ ನೂತನ ಅಧ್ಯಕ್ಷರ ಆಯ್ಕೆ ಸಾಧ್ಯತೆ ಜಟಿಲವಾಗುತ್ತಿರುವ ಮಧ್ಯೆಯೇ ಅಧ್ಯಕ್ಷಗಿರಿಗೆ ಹೊಸ ಹೆಸರು ಸೇರ್ಪಡೆಯಾಗುತ್ತಿದೆ.
ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್
ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್
Updated on

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮತ್ತು ಪ್ರದೇಶ ಕಾಂಗ್ರೆಸ್‍ಗೆ ನೂತನ ಅಧ್ಯಕ್ಷರ ಆಯ್ಕೆ ಸಾಧ್ಯತೆ ಜಟಿಲವಾಗುತ್ತಿರುವ ಮಧ್ಯೆಯೇ ಅಧ್ಯಕ್ಷಗಿರಿಗೆ ಹೊಸ ಹೆಸರು ಸೇರ್ಪಡೆಯಾಗುತ್ತಿದೆ.

`ಕೊಟ್ಟರೆ ಉಪಮುಖ್ಯಮಂತ್ರಿ ಸ್ಥಾನ, ಇಲ್ಲವಾದರೆ ಕೆಪಿಸಿಸಿ ಅಧ್ಯಕ್ಷಗಿರಿಯೇ ಸಾಕು' ಎಂದು ಡಾ. ಜಿ.ಪರಮೇಶ್ವರ ಒಂದೆಡೆ ಪಟ್ಟು ಹಿಡಿದು ಕುಳಿತಿದ್ದರೆ, ಇನ್ನೊಂದೆಡೆ ಸಂಪುಟ ವಿಸ್ತರಣೆ ವೇಳೆ, ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಕಿರಿಕಿರಿ ತಪ್ಪಿಸಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಈ ಎರಡು ಪಟ್ಟುಗಳ ಮಧ್ಯೆ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ ಸಿಕ್ಕಿಕೊಂಡಿದೆ.

ಆದಾಗಿಯೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಯಾರಿಗೆ ಕಟ್ಟಿದರೆ ಸೂಕ್ತ ಎಂಬ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ಬಣದ ಮಧ್ಯೆ ಪ್ರತ್ಯೇಕವಾದ ಚರ್ಚೆ ನಡೆಯುತ್ತಿದೆ.
ಕುತೂಹಲಕಾರಿ ಸಂಗತಿ ಎಂದರೆ ಈ ಬಾರಿ ಯಾರೇ ಅಧ್ಯಕ್ಷರಾದರೂ ಅದು `ತಾತ್ಕಾಲಿಕ ವ್ಯವಸ್ಥೆ' ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಅಂದರೆ ಮುಂದಿನ ವಿಧಾನಸಭೆ ಚುನಾವಣೆಯವರೆಗೆ ಮಾತ್ರ ಈಗ ನೇಮಕಗೊಂಡವರು ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ. ಆ ಬಳಿಕ ರಾಜಕೀಯ ಚಿತ್ರಣವನ್ನು ಆಧರಿಸಿ ಹೊಸಬರ ನೇಮಕ ಸಾಧ್ಯತೆ ದಟ್ಟವಾಗಿದೆ.

ಮುಂಚೂಣಿಯಲ್ಲಿ ದಿನೇಶ್, ಪಾಟೀಲ್: ಇಷ್ಟು ದಿನ ಕೆಪಿಸಿಸಿಗೆ ಕೇಳಿ ಬರುತ್ತಿದ್ದ ಸಂಭಾವ್ಯರ ಹೆಸರು ಈಗ ನಿಧಾನವಾಗಿ ಹಿಂದೆ ಸರಿಯಲಾರಂಭಿಸಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹಾಗೂ ಐಟಿ ಬಿಟಿ ಸಚಿವ ಡಾ.ಎಸ್.ಆರ್.ಪಾಟೀಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಮುಂದುವರಿದ ಸಮುದಾಯದವರಿಗೆ ಕೆಪಿಸಿಸಿ ಪಟ್ಟ ಕಟ್ಟಬೇಕೆಂಬ ಚಿಂತನೆ ಹೈಕಮಾಂಡ್‍ನದ್ದು. ಜತೆಗೆ ಅವರು ಮೂಲ ಕಾಂಗ್ರೆಸ್‍ನವರೇ ಆಗಿರಬೇಕೆಂಬ ವಾದ ಬಲವಾಗಿದೆ. ಹೀಗಾಗಿ ಈ ಎರಡರ ಪೈಕಿ ಯಾರಾದರೊಬ್ಬರು ಅಧ್ಯಕ್ಷರಾಗುವ ಸಾಧ್ಯತೆ ಇದೆ. ಜತೆಗೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮತ್ತು ಸಂಪುಟ ವಿಸ್ತರಣೆ ಮಧ್ಯೆ ಸೂಕ್ಷ್ಮ ರಾಜಕೀಯ ಕೊಂಡಿ ಇದೆ.

ಹಾಲಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ ಈಗ ವಿಧಾನ ಪರಿಷತ್ನ್ನು ಪ್ರತಿನಿಧಿಸುತ್ತಿದ್ದಾರೆ. ಮೇಲ್ಮನೆಯ ಒಬ್ಬ ಸದಸ್ಯರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕೆಂಬುದು ಸಿಎಂ ಸಿದ್ದರಾಮಯ್ಯ ಅವರ ವಾದ. ಆದರೆ ಪರಮೇಶ್ವರ ಸೇರ್ಪಡೆ ರಾಜಕೀಯ ಅನಿವಾರ್ಯತೆಯಾಗಿರುತ್ತದೆ. ಹೀಗಾಗಿ ಹಾಲಿ ವಿಧಾನಪರಿಷತ್ ಸಭಾ ನಾಯಕ ಹಾಗೂ ಸಚಿವ ಎಸ್.ಆರ್.ಪಾಟೀಲ್ ಅವರನ್ನು ಸಂಪುಟದಿಂದ ಕೈ ಬಿಡುವುದು ಅನಿವಾರ್ಯವಾಗುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷಗಿರಿ ನೀಡಬಹುದು. ಒಂದೊಮ್ಮೆ ಪರಮೇಶ್ವರ ಸಂಪುಟ ಸೇರಲು ಒಪ್ಪದೇ ಇದ್ದರೂ ಅವರು ಕೆಪಿಸಿಸಿಯಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆ. ಆಗ ದಿನೇಶ್ ಗುಂಡೂರಾವ್ ಅವರಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ದಿನೇಶ್ ಗುಂಡೂರಾವ್ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ನಿರ್ಧರಿಸಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಕೈ ಬಿಟ್ಟು, ಆ ಜಾಗಕ್ಕೆ ಹಿರಿಯ ಶಾಸಕ ರಮೇಶ್ ಕುಮಾರ್ ಅವರನ್ನು ಭರ್ತಿ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷಗಿರಿ ಅಥವಾ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಯಾವುದಾದರೊಂದು ದಿನೇಶ್ ಗುಂಡೂರಾವ್ ಅವರಿಗೆ ಲಭಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.

ಬಿ.ಕೆ. ಹರಿಪ್ರಸಾದ್ ಆಸಕ್ತಿ
ಈ ಮಧ್ಯೆ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಹೆಸರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಮೇನಲ್ಲಿ ನಡೆಯುವ ಎಐಸಿಸಿ ಪುನಾರಚನೆ ಸಂದರ್ಭದಲ್ಲಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯ ದರ್ಶಿಸ್ಥಾನ ತಪ್ಪುವ ಸಾಧ್ಯತೆ ಇದೆ. ಹೀಗಾಗಿ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜತೆ ಹರಿಪ್ರಸಾದ್ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರಿಗೆ ಪಟ್ಟ ದೊರೆತರೂ ಆಶ್ಚರ್ಯವಿಲ್ಲ. ಆದರೆ ಹರಿಪ್ರಸಾದ್ ಅವರೂ ಹಿಂದುಳಿದವರ್ಗಕ್ಕೆಸೇರಿರುವುದುಜಾತಿ ಲೆಕ್ಕಾಚಾರದ ದೃಷ್ಟಿಯಿಂದ ಅಡ್ಡಿಯಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com