
ವಿಧಾನ ಪರಿಷತ್: `ಜಯಚಂದ್ರ ಅವರೇ ತಾಕತ್ತಿದ್ದರೆ ವಿಧಾನ ಪರಿಷತ್ ವಿಸರ್ಜನೆ ಮಾಡಿ, ನೋಡೋಣ. ನಿಮ್ಮಂಥ ರಾಜಕಾರಣಿಗೇ ಈ ರೀತಿ ಹೇಳಿಕೆಗಳು ಶೋಭೆ ತರುವುದಿಲ್ಲ. ವಿಧಾನ ಪರಿಷತ್ ಬಗೆಗಿನ ನಿಮ್ಮ ಅಸಡ್ಡೆಯ ಹೇಳಿಕೆ ಇದೇ ಮೊದಲಲ್ಲ' ವಿಧಾನ ಪರಿಷತ್ ರದ್ದುಗೊಳಿಸುವ ಬಗ್ಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೀಡಿದ ಹೇಳಿಕೆ ವಿರುದ್ಧ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ ಪರಿಯಿದು.
`ನಾನು ಇಂಥ ಹೇಳಿಕೆ ಕೊಟ್ಟೆ ಇಲ್ಲ ಎಂದು ಈಗ ಹೇಳಬಹುದು. ಅದು ನಿಜವಾಗಿದ್ದರೇ ಆ ಕೆಲಸವನ್ನು ಹೇಳಿಕೆ ನೀಡಿದ್ದ ಮಾರನೇ ದಿನ ಮಾಡುತ್ತಿದ್ದರು. ಆದರೆ, ಈಗ ಮಾಧ್ಯಮಗಳಲ್ಲಿ ಹೇಳಿಕೆ ತಿರುಚಲಾಗಿದೆ ಎಂದು ಹೇಳುತ್ತಾರೆ. ಉತ್ತಮ ಅಥವಾ ಹೊಗಳಿಕೆಯ ಹೇಳಿಕೆ ಬಂದಾಗ ನಾನು ಹೀಗೆ ಹೇಳಿಲ್ಲ ಎಂದು ಯಾವತ್ತೂ ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸುವುದಿಲ್ಲ. ಆದರೆ, ವಿವಾದಿತ ಹೇಳಿಕೆ ನೀಡಿ ತಿರುಚಲಾಗಿದೆ ಎಂದು ಹೇಳುವುದು ಏಕೆ? ಹೇಳಬೇಕಾಗಿರುವುದನ್ನು ಸದನದ ಹೊರಗೆ ಹೇಳಿ, ಇಲ್ಲಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸವುದು ಏಕೆ?' ಎಂದು ಸಚಿವ ಜಯಚಂದ್ರ ಅವರನ್ನು ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
ಇಂಥ ಉದ್ಧಟತನದ ಹೇಳಿಕೆ ನೀಡುವುದನ್ನು ನಿಲ್ಲಿಸಿ. ಕಾನೂನು ಸಚಿವರ ಘನತೆಗೆ ತಕ್ಕಂತೆ ನಡೆದು ಕೊಳ್ಳಬೇಕು. ಅದನ್ನು ಬಿಟ್ಟು ನೀವು ಅಂದುಕೊಂಡ ಕೆಲಸವಾಗಿಲ್ಲ ಎಂದಾದಾಗ ಅಸ್ತಿತ್ವದ ಬಗ್ಗೆ ಪ್ರಶ್ನೆ ಎತ್ತಿದರೇ ರಾಜ್ಯದ ಜನ ಸುಮ್ಮನಿರಲು ಸಾಧ್ಯವಿಲ್ಲ. ನಾವು ಸದಸ್ಯರು ಹಕ್ಕು ಚ್ಯುತಿ ಮಂಡಿಸಬೇಕಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಸಿದರು. ನಾನು ಇಂತಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಲು ಸಚಿವರು ಮುಂದಾದಾಗ, ಟಿವಿಯಲ್ಲಿಯೂ ಹೇಳಿಕೆ ನೋಡಿದ್ದೇನೆ. ಪತ್ರಿಕೆಯಲ್ಲಿ ಬಂದಿದ್ದು ಸುಳ್ಳಾದರೇ, ವಿಡಿಯೋ ತುಣುಕಿನಲ್ಲಿ ನೋಡಿದ್ದು, ಕೇಳಿದ್ದು ಕೂಡ ಸುಳ್ಳಾಗಲು ಸಾಧ್ಯವೇ ಎಂದು ಈಶ್ವರಪ್ಪ ಹೇಳಿದರು.
Advertisement