
ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಹುನ್ನಾರ ಇನ್ನೂ ಮುಂದುವರಿಸಿ ದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಮತ್ತೆ ಸುಪ್ರಿಂ ಮೆಟ್ಟಿಲೇರುವ ಸಾಧ್ಯತೆ ಇದೆ. ಚುನಾವಣೆ ನಡೆದರೆ ಸೋಲುವ ಭಯದಿಂದ ಇನ್ನೂ ಚುನಾವಣೆ ಮುಂದೂಡುವ ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು.
ಬಿಬಿಎಂಪಿ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿದ್ದೇವೆ. ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದಿರುವವರು ಉತ್ತಮ ಹಿನ್ನೆಲೆಯುಳ್ಳವರನ್ನು ಗುರುತಿಸಿ ಆಯ್ಕೆ ಮಾಡಲಾಗುತ್ತಿದೆ ಎಂದರು. ಹಿಂದಿನ ಎರಡು ವರ್ಷ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ಏನು ಕೊಡುಗೆ ನೀಡಿದೆ ಎಂದು ಜನರಿಗೆ ಗೊತ್ತಿದೆ. ಅದೇ ರೀತಿ 3 ವರ್ಷ ಬಿಜೆಪಿ ಸರ್ಕಾರ ಏನೆಲ್ಲಾ ನೀಡಿತು ಎಂಬುದೂ ಗೊತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಅನುಭವವೂ ಬೆಂಗಳೂರು ಮತದಾರರಿಗೆ
ಆಗಿದೆ. ಅಭಿವೃದ್ಧಿ ಹೆಸರಲ್ಲಿ ಲೂಟಿ ನಡೆಸುವುದರಲ್ಲೇ ರಾಷ್ಟ್ರೀಯ ಪಕ್ಷಗಳಲ್ಲಿ ಪೈಪೋಟಿ ನಡೆಯಿತೇ ಹೊರತು ಜನರ ನಿರೀಕ್ಷೆ ಈಡೇರಲಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದಾಗ ಹಗರಣ ಹೊರಗೆ ಬರಬಾರದೆಂದು ಕಡತಗಳಿದ್ದ ಕೊಠಡಿಗೆ ಬೆಂಕಿ ಹಾಕಲಾಯಿತು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆ ಪಕ್ಷದ ಶಾಸಕರಿಗೆ ಸೇರಿದ ಮನೆಯಲ್ಲಿ ಸಾವಿರಾರು ಬಿಬಿಎಂಪಿ ಕಡತ ಸಿಕ್ಕಿತು. ಇವೆಲ್ಲ ಅಕ್ರಮ ಸರಮಾಲೆಗೆ ಉದಾಹರಣೆ ಎಂದರಲ್ಲದೇ, ಶುದ್ಧವಾದ ಆಡಳಿತ, ಜನಸ್ನೇಹಿ ಪಾಲಿಕೆ ನಮ್ಮ ಗುರಿ. ಈ ವಿಚಾರದಲ್ಲಿ ಜನರ ವಿಶ್ವಾಸ ಗಳಿಸುತ್ತೇವೆ ಎಂದರು.
Advertisement