ಚುನಾವಣಾ ರಣತಂತ್ರ ಸಿಎಂ ನೇತೃತ್ವದಲ್ಲಿ ಚರ್ಚೆ

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ರಾಜಕೀಯ ಚಟುವಟಿಕೆಗಳು ಚಿಗಿತುಕೊಂಡಿದ್ದು ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ ಬುಧವಾರ ಮಹತ್ವದ ಸಭೆ ನಡೆದಿದೆ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ರಾಜಕೀಯ ಚಟುವಟಿಕೆಗಳು ಚಿಗಿತುಕೊಂಡಿದ್ದು  ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ ಬುಧವಾರ ಮಹತ್ವದ ಸಭೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಚಿವ ಕೆ.ಜೆ. ಜಾರ್ಜ್, ಪಕ್ಷದಿಂದ ಚುನಾವಣಾ ಉದ್ದೇಶಕ್ಕಾಗಿ ನಿಯೋಜನೆ ಗೊಂಡಿರುವ ವಕ್ತಾರರ ಜತೆ ಬೆಳಗಿನ ಉಪಹಾರದ ಜತೆ ಚರ್ಚೆನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ರಣತಂತ್ರದ ಬಗ್ಗೆ ಮಾತನಾಡಿದ್ದಾರೆ.

ಶತಾಯಗತಾಯ ಗೆಲ್ಲಲೇಬೇಕು: ಬಿಬಿಎಂಪಿ ಚುನಾವಣೆ ಪಕ್ಷ ಮತ್ತು ಸರ್ಕಾರದ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಹಾಗೂ ಜೆಡಿಎಸ್‍ನ ನಿಜಮುಖವನ್ನು ಜನತೆಯ ಮುಂದೆ ಬಟಾಬಯಲುಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ವಕ್ತಾರರಿಗೆ ಸಲಹೆ ನೀಡಿದ್ದಾರೆ. ಬಿಜೆಪಿ ಕಾಲದಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅಭಿಪ್ರಾಯ ಜನಮಾನಸದಲ್ಲಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸಬೇಕು.ಅವರ ಆಡಳಿತಾವಧಿಯಲ್ಲಿ  ನಡೆದ ಹಗರಣಗಳ ಬಗ್ಗೆ ಜನರಿಗೆ ತಿಳಿಸಬೇಕು.

ಬಿಬಿಎಂಪಿ ಆಡಳಿತಾತ್ಮಕವಾಗಿ ಕುಸಿದು ಹೋಗುವುದಕ್ಕೆ ನಗರ ಸುತ್ತಲಿನ 110 ಹಳ್ಳಿಗಳು ಹಾಗೂ 7 ನಗರ ಪಾಲಿಕೆಗಳನ್ನು 20-20 ಸರ್ಕಾರದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರು ಬಿಎಂಪಿಗೆ ಸೇರಿಸಿ ಬಿಬಿಎಂಪಿ ಎಂದು ಪರಿವರ್ತನೆ ಮಾಡಿರುವುದೇ ಕಾರಣ. ಈ ಎರಡು ಅಂಶಗಳನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನವಾಗಿ ಬಿಂಬಿಸಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಇಂದು?
ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವುದಕ್ಕೆ ಕೆಪಿಸಿಸಿಯಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಪರಿಶೀಲನಾ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ವರ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, 80 ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬಿಬಿಎಂಪಿ ವಾರ್ಡ್‍ಗಳಿಗೆ ಸಂಭಾವ್ಯ  ಅಭ್ಯರ್ಥಿಗಳ ಹೆಸರನ್ನು ಉಸ್ತುವಾರಿ ಸಚಿವರು ಈಗಾಗಲೇ ಸಂಗ್ರಹಿಸಿದ್ದಾರೆ. ಈ ಪೈಕಿ ಒಂದೇ ಹೆಸರು ಇರುವ ಪಟ್ಟಿಯನ್ನು ಕಾಂಗ್ರೆಸ್ ಗುರುವಾರ ಪ್ರಕಟಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com