ಮೊದಲಪಟ್ಟಿಗೆ ಆಕ್ರೋಶ ಕಂಡುಬಂದ ಹಿನ್ನೆಲೆಯಲ್ಲಿ ಎಚ್ಚರಿಕೆ ಹೆಜ್ಜೆ

ಒಂದು ಕಡೆ ಟಿಕೆಟ್ ಆಕಾಂಕ್ಷಿಗಳ ಹಪಾಹಪಿ, ಇನ್ನೊಂದು ಕಡೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ನಾಯಕರ ತಿಣುಕಾಟ- ಇದೆಲ್ಲದರ ನಡುವೆ ಅಲ್ಲಲ್ಲಿ ಸಿಟ್ಟು ಸೆಡವು..
ಬಿಜೆಪಿ ಚಿಹ್ನೆ
ಬಿಜೆಪಿ ಚಿಹ್ನೆ

ಬೆಂಗಳೂರು: ಒಂದು ಕಡೆ ಟಿಕೆಟ್ ಆಕಾಂಕ್ಷಿಗಳ ಹಪಾಹಪಿ, ಇನ್ನೊಂದು ಕಡೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ನಾಯಕರ ತಿಣುಕಾಟ- ಇದೆಲ್ಲದರ ನಡುವೆ ಅಲ್ಲಲ್ಲಿ ಸಿಟ್ಟು ಸೆಡವು, ಆಕ್ರೋಶ. ಇವೆಲ್ಲಾ ಶುಕ್ರವಾರ ಬಿಜೆಪಿ ಪಾಳಯದಲ್ಲಿ ಕಂಡುಬಂದ ಸಂಗತಿಗಳು. ಮಂಗಳವಾರ 96 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಸಣ್ಣಪುಟ್ಟ ಅಸಮಾಧಾನ ಎದುರಿಸಿದ್ದ ಬಿಜೆಪಿ ನಾಯಕರು, ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಸಭೆ ಸೇರುವ ಮುನ್ನವೇ ಸಾಕಷ್ಟು ಒತ್ತಡಕ್ಕೆ ಒಳಗಾದಂತೆ ಕಂಡುಬಂದರು. ಅಭ್ಯರ್ಥಿ ಆಕಾಂಕ್ಷಿಗಳು ತರುತ್ತಿದ್ದ ಒತ್ತಡದ ಭಾರವನ್ನು ಹೊರಲಾರದೇ ಹೆಣಗಾಡುತ್ತಿದ್ದ ಬೆಂಗಳೂರಿನ ಶಾಸಕರು, ಸಂಸದರು, ಪಕ್ಷದ ಮುಖಂಡರು ಆಗಿಂದಾಗೆ ತಲೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು ಸುಳ್ಳಲ್ಲ.

ಇನ್ನೊಂದು ಕಡೆ ತಮ್ಮವರಿಗೆ ಟಿಕೆಟ್ ಕೊಡಿಸಲು ಬೆಂಗಳೂರಿನ ಬಿಜೆಪಿ ಶಾಸಕರು ಇನ್ನಿಲ್ಲದ ಸಾಹಸ ಪಡುತ್ತಿದ್ದರು. ಇದಕ್ಕಾಗಿ ಅನೇಕ ಮನವೊಲಿಕೆ ಸಭೆಗಳನ್ನೂ ಬೆಳಗ್ಗೆಯಿಂದ ನಡೆಸಿದ್ದರು. ನಂತರ ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಬಿಬಿಎಂಪಿ ಚುನಾವಣಾ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡರು. ಅತಿ ಕಡಿಮೆ ಮತ್ತು ಶೂನ್ಯ ಪ್ರತಿರೋಧವಿದ್ದ 96 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಜೆಪಿ ಕೋರ್ ಕಮಿಟಿಗೆ ಎರಡನೇ ಪಟ್ಟಿ ಬಿಡುಗಡೆ ಮಾಡುವುದು ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿಯೇ ಶುಕ್ರವಾರ ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತೇವೆಂದು ಹೇಳಿಕೊಂಡಿದ್ದವರು ಏಕಾಏಕಿ ನಿಲುವು ಬದಲಿಸಿ ಅಂತಿಮ ಪಟ್ಟಿ ಶನಿವಾರ ಎಂದು ಘೋಷಿಸಿದರು

ಟಿಕೆಟ್ ಸಿಗದವರ ಸಿಟ್ಟು: ಮೊದಲ ಪಟ್ಟಿ ಬಿಡುಗಡೆಯಾದ ನಂತರ ಟಿಕೆಟ್ ವಂಚಿತ ಕೆಲವರು ಶುಕ್ರವಾರ ಸಹ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿ ಮುಂಭಾಗ ಜಮಾಯಿಸಿ ಅಸಮಾಧಾನದ ಮಾತುಗಳನ್ನಾಡುತ್ತಿದ್ದರು. ಇನ್ನೊಂದು ಕಡೆ ಮಾಜಿ ಸಚಿವ ವಿ.ಸೋಮಣ್ಣ ಅವರ ಮನೆ ಮುಂಭಾಗ, ದಾಸರಹಳ್ಳಿ ಶಾಸಕ ಮುನಿರಾಜು ಅವರ ಬಿಜೆಪಿ ಕಚೇರಿ ಬಳಿ, ಜಕ್ಕಸಂದ್ರ ವಾರ್ಡ್‍ನಲ್ಲಿ ಟಿಕೆಟ್ ವಂಚಿತರು ತಮ್ಮ ಅಸಮಾಧಾನ ಹೊರಹಾಕಿ ಬಿಜೆಪಿ ಮುಖಂಡರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡ್ ಲ್ಲಿ ಎಚ್.ಎಲ್ ಗಂಗಾಧರ್ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಪ್ರತಿಭಟನೆ ಮಾಡಿ ಶಾಸಕ ಮುನಿರಾದು ಬಿಜೆಪಿ ನಾಯಕರ
ಪ್ರತಿಕೃತಿ ದಹಿಸಿದ್ದಾರೆ.

ಜೊತೆಗೆ ತಾವೇ ನಿರ್ಮಿಸಿಕೊಂಡಿದ್ದ ಬಿಜೆಪಿ ಕಚೇರಿಯ ಮುಂಭಾಗ ಹಾಕಲಾಗಿದ್ದ ಬಿಜೆಪಿ ನಾಯಕ ಚಿತ್ರವಿರುವ ಫ್ಲೆಕ್ಸ್ಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ವಾರ್ಡ್‍ನಲ್ಲಿ ಮತ್ತು ಪಕ್ಕದ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಇದೇ ಸಂದರ್ಭದಲ್ಲಿ ಘೋಷಿಸಿಕೊಂಡರು. ಈ ಮಧ್ಯೆ 2 ಸಲ ಸತತವಾಗಿ ಸೋತಿದ್ದರೂ ಜೆ.ಸಿ.ನಗರ ವಾರ್ಡ್‍ಗೆ ಗಣೇಶ್‍ರಾವ್ ಮಾನೆ ಎಂಬುವರಿಗೆ ಟಿಕೆಟ್ ನೀಡಿರುವುದಕ್ಕೆ ಸ್ಥಳೀಯರು ಪಕ್ಷದ ಮುಖಂಡರಿಗೆ ದೂರು ಸಲ್ಲಿಸಿದ್ದಾರೆ.

ಹಂಪಿನಗರ ವಾರ್ಡ್‍ನಲ್ಲಿ ಚಂದ್ರಶೇಖರಯ್ಯ ಅವರ ಬದಲಾಗಿ ಬೇರೆಯವರಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡ ಚಂದ್ರಶೇಖರಯ್ಯ ಅಭಿಮಾನಿಗಳು ವಿ.ಸೋಮಣ್ಣ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿ, ಚಂದ್ರಶೇಖರಯ್ಯನವರಿಗೆ ಆಗಿರುವ ಅನ್ಯಾಯ
ಸರಿಪಡಿಸುವಂತೆ ಆಗ್ರಹಿಸಿದರು. ಜಕ್ಕಸಂದ್ರ ವಾರ್ಡ್‍ನಲ್ಲಿ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಬೇಕೆಂದು ಅವರ ಬೆಂಬಲಿಗರು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಕುಮಾರ್ ಅವರ ಕಚೇರಿ ಎದುರು ಜಮಾಯಿಸಿ ಅಸಮಾಧಾನ ಹೊರಹಾಕಿದರು. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಎದುರೂ ಸಹ ಹಲವು ಟಿಕೆಟ್ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿ ಟಿಕೆಟ್‍ಗಾಗಿ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com