ಬಿಬಿಎಂಪಿ ಫಲಿತಾಂಶ ಜನಾದೇಶವಲ್ಲ: ಸಿಎಂ

ಬಿಬಿಎಂಪಿ ಚುನಾವಣಾ ಫಲಿತಾಂಶ ತಮ್ಮ ನೇತೃತ್ವದ ಸರ್ಕಾರಕ್ಕೆ ಜನಾದೇಶ ಆಗುವುದಿಲ್ಲ ಎಂದು ಸಿ.ಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಸಂಪಾದಕರೊಂದಿಗೆ ಸಿಎಂ ಚರ್ಚೆ
ಸಂಪಾದಕರೊಂದಿಗೆ ಸಿಎಂ ಚರ್ಚೆ

ಬೆಂಗಳೂರು: ಬಿಬಿಎಂಪಿ ಚುನಾವಣಾ ಫಲಿತಾಂಶ ತಮ್ಮ ನೇತೃತ್ವದ ಸರ್ಕಾರಕ್ಕೆ ಜನಾದೇಶ ಆಗುವುದಿಲ್ಲ ಎಂದು ಸಿ.ಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕೆಗಳ ಸಂಪಾದಕರಿಗೆ ಏರ್ಪಡಿಸಿದ್ದ ಚಹಾಕೂಟದಲ್ಲಿ ಮಾತನಾಡಿರುವ ಅವರು, ಬಿಬಿಎಂಪಿ ಚುನಾವಣಾ ಫಲಿತಾಂಶ ಸರ್ಕಾರಕ್ಕೆ ಜನಮತಗಣನೆ ಆಗುವುದಿಲ್ಲ. ಖಂಡಿತವಾಗಿಯೂ ನಮಗೆ ಬಹುಮತ ಬಂದೇ ಬರುತ್ತದೆ. ಪಾಲಿಕೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ಇದೆ. ಫಲಿತಾಂಶ ಏನೇ ಆಗಲಿ ನಾವು ಬೆಂಗಳೂರಿನ ಜನತೆಗೆ ಕೊಟ್ಟಿರುವ ಭರವಸೆಗಳನ್ನು ಚಾಚೂ ತಪ್ಪದೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಫಲಿತಾಂಶ ತಮ್ಮ ಪಕ್ಷಕ್ಕೆ ವಿರುದ್ಧವಾಗಿ ಬಂದಲ್ಲಿ? ಎಂಬ ಪ್ರಶ್ನೆಗೆ ಅದನ್ನು ಎಚ್ಚರಿಕೆ ಎಂದು ಭಾವಿಸುತ್ತೇವೆ ಎಂದು ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಯನ್ನು ಸೂಪರ್ ಸಿದ ಮಾಡಿ ಆಡಳಿತಾಧಿಕಾರಿ ನೇಮಿಸಿದ ಬಳಿಕ ಕಳೆದ 4 ತಿಂಗಳ ಅವಧಿಯಲ್ಲಿ ರೂ 1 ,500 ಕೋಟಿ ತೆರಿಗೆ ಸಂಗ್ರಹವಾಗಿದೆ. ನಿಜಕ್ಕೂ ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಹಸ್ತಕ್ಷೇಪ ಇಲ್ಲ : ಬಿಬಿಎಂಪಿ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಪ್ರಜಾಸತ್ತಾತ್ಮಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮುಖ್ಯಮಂತ್ರಿಯದು ಒಂದು ಪಟ್ಟಿ, ಕೆಪಿಸಿಸಿ ಅಧ್ಯಕ್ಷರದ್ದು ಮತ್ತೊಂದು ಪಟ್ಟಿ ಅನ್ನುವ ವರದಿಗಳು ಸುಳ್ಳು. ಇದ್ದದ್ದು ಒಂದೇ ಒಂದು ಪಟ್ಟಿ. ಚುನಾವಣೆ ಜವಾಬ್ದಾರಿಯನ್ನು ಸಚಿವರಿಗೆ ನೀಡಲಾಗಿದೆ. ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಬಿಎಂಪಿ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾಗಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ವಾಪಸಾಗುತ್ತಾರೆ. 50 ತಿಂಗಳು- 50 ತಿಂಗಳು ಅಧಿಕಾರ ಹಂಚಿಕೆ ಆಗಲಿದೆ ಎಂಬ ಸುದ್ದಿಗಳು ದಟ್ಟವಾಗಿ ಹರಿದಾಡುತ್ತಿವೆಯಲ್ಲ? ಎಂಬ ಪ್ರಶ್ನೆಗೆ ಇಂಥ ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com