

ಬೆಂಗಳೂರು: ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರನ್ನು ಕೆಣಕಿದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವುದಕ್ಕಾಗಿ ಶನಿವಾರ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಬೆಂಗಳೂರು ನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ನಾರಾಯಣಸ್ವಾಮಿ ಅವರ ಪರವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತ ಯಾಚಿಸಿ ಮಾತನಾಡಿದ ಅವರು, ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರ ಕಟಕಟೆಗೆ ಏರುಸುತ್ತಿದೆ ಎಂದು ಆರೋಪಿಸಿದರು.
ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರು ಒಂದೇ ಒಂದು ಪೈಸೆ ದುರ್ಬಳಕೆ ಮಾಡಿಲ್ಲ. ಆದಾಗಿಯೂ ಅವರನ್ನು ಮನೆ ಹೊಡೆದವರಂತೆ ಬಿಂಬಿಸಲಾಗುತ್ತಿದೆ. ಇದನ್ನು ನಾವು ಹೊಡೆದವರಂತೆ ಬಿಂಬಿಸಲಾಗುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಳಿಕ ಈ ಗ ಮತ್ತೆ ನಮ್ಮ ಮುಖಂಡರ ವಿರುದ್ಧ ದ್ವೇಷದ ರಾಜಕಾರಣ ನಡೆಸಲಾಗುತ್ತಿದೆ. ಇದನ್ನು ಪ್ರತಿಭಟಿಸಿ ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಲ್ಲ ಕಾರ್ಯಕರ್ತರು, ಮುಖಂಡರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಆದರೆ ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್‍ಗೆ ಬಹುಮತ ಇಲ್ಲ. ಹೀಗಾಗಿ ಪ್ರಮುಖ ನಿರ್ಧಾರಗಳಿಗೆ ಅಂಗೀಕಾರ ದೊರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ನನಗಂತೂ 20ಕ್ಕೆ 20 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸುತ್ತದೆ ಎಂಬ ವಿಶ್ವಾಸವಿದೆ. ಈ ಹಿಂದೆ 2000 ಇಸ್ವಿಯಲ್ಲಿ ಕಾಂಗ್ರೆಸ್ 25ರಲ್ಲಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು ಎಂದರು.
ಹಿಂದೆ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ದಯಾನಂದ ರೆಡ್ಡಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರಿಗೆ ಈ ಬಾರಿ ಏಕೆ ಟಿಕೆಟ್ ನೀಡಲಿಲ್ಲ ಎಂಬುದಕ್ಕೆ ಹಲವು ಕಾರಣಗಳಿವೆ. ಅವೆಲ್ಲವನ್ನೂ ಬಹಿರಂಗವಾಗಿ ಚರ್ಚಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದ ಅವರಿಗೆ ನಾಮಪತ್ರ ವಾಪಸ್ ಪಡೆಯುವಂತೆ ನಾನು ಹಾಗೂ ಸಿಎಂ ಸಾಕಷ್ಟು ಒತ್ತಾಯ ಮಾಡಿದರೂ ಅವರು ಕೇಳಿಲ್ಲ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲೆ ಇದೆ ಎಂದರು.
ಹೇಳಿಕೆ ನೀಡಿ ಈಶ್ವರಪ್ಪ ಸಿಕ್ಕಾಕಂಡ
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿ ಒಂದು ಸ್ಥಾನ ಹೆಚ್ಚು ಗೆಲ್ಲುತ್ತದೆ ಎಂದು ಹೇಳಿಕೆ ನೀಡಿ ಕೆ.ಎಸ್.ಈಶ್ವರಪ್ಪ ಸಿಕ್ಕಾಕಂಡ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 20ಕ್ಕೆ 20 ಸ್ಥಾನದಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಆದರೆ ಈಶ್ವರಪ್ಪ ಕಾಂಗ್ರೆಸ್‍ಗಿಂತ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಯಾವಾಗಲೂ ಬೇಡದೇ ಇರುವ ಹೇಳಿಕೆ ನೀಡುತ್ತಾರೆ. ಬಹುಶ: ಅವರ ಬ್ರೈನ್ ಮತ್ತು ನಾಲಗೆಗೆ ಲಿಂಕ್ ತಪ್ಪಿ ಹೋಗಿದೆ. ಈ ಹೇಳಿಕೆ ನೀಡಿ ಈಶ್ವರಪ್ಪ ಸಿಕ್ಕಾಕ್ಕಂಡ ಎಂದು ಹೇಳಿದರು.