ಕಸ್ತೂರಿರಂಗನ್ ವರದಿ ಯಥಾವತ್ ಬೇಡ

ಅದನ್ನು ಓದುವುದಕ್ಕೆ ಚೆಂದ, ಭಾಷಣ ಮಾಡುವುದಕ್ಕೂ ಅಂದ. ಆದರೆ, ಅದು ಜಾರಿಗೆ ಬಂದರೆ ಮಲೆನಾಡಿನ ಜನರ ಬದುಕಿಗೆ ತೀವ್ರ ಕಷ್ಟ! ...
ಪಶ್ಚಿಮ ಘಟ್ಟ
ಪಶ್ಚಿಮ ಘಟ್ಟ

ಬೆಂಗಳೂರು: ಅದನ್ನು ಓದುವುದಕ್ಕೆ ಚೆಂದ, ಭಾಷಣ ಮಾಡುವುದಕ್ಕೂ ಅಂದ. ಆದರೆ, ಅದು ಜಾರಿಗೆ ಬಂದರೆ ಮಲೆನಾಡಿನ ಜನರ ಬದುಕಿಗೆ ತೀವ್ರ ಕಷ್ಟ! ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ಹಾಗೂ ಜೀವವೈವಿಧ್ಯತೆ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ.ಕಸ್ತೂರಿ ರಂಗನ್ ವರದಿ ಜಾರಿಗೆ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಆತಂಕ ವ್ಯಕ್ತಪಡಿಸಿದ ಪರಿಯಿದು. ಸಿಟಿಜನ್ಸ್ ಫಾರ ಡೆಮಾಕ್ರಸಿ ಫೋರಂ ವತಿಯಿಂದ ಮಂಗಳವಾರ ಡಾ.ಕಸ್ತೂರಿ ರಂಗನ್ ವರದಿ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವರದಿಯ ಯಥಾವತ್ ಜಾರಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಸಂವಾದದಲ್ಲಿ ಭಾಗವಹಿಸಿದ್ದ ಭಾನುಪ್ರಕಾಶ್ ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು, ಪರಿಸರವಾದಿಗಳು, ತಜ್ಞರುಹಾಗೂ ರೈತರು ವರದಿ ಜಾರಿಯಿಂದ ಮುಂದಾಗ ಬಹುದಾದ ಅನಾಹುತಗಳನ್ನು ಪ್ರಸ್ತಾಪಿಸಿ ಆತಂಕ ವ್ಯಕ್ತಪಡಿಸಿದರು. ವರದಿ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡದ ಆಡಳಿತ ವ್ಯವಸ್ಥೆ ವಿರುದಟಛಿವೂ ಕಿಡಿಕಾರಿದರು.

ಊಹಾಪೋಹ : ಆರಂಭದಲ್ಲಿಯೇ ಆರ್ಥಿಕ ತಜ್ಞ ಬಿ. ಎಂ. ಕುಮಾರಸ್ವಾಮಿ ಮಾತನಾಡಿ, ಡಾ. ಕಸ್ತೂರಿ ರಂಗನ್ ವರದಿಯಲ್ಲಿರುವ ಪ್ರಮುಖ ಅಂಶಗಳನ್ನು ಸಭೆಯ ಮುಂದಿಟ್ಟರು. ವರದಿ ಜಾರಿಯಾದರೆ, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ ಜನರನ್ನು ಎತ್ತಂಗಡಿ ಮಾಡಲಾಗುತ್ತದೆ ಎಂಬುದು ಊಹಾಪೋಹ. ಬದಲಿಗೆ ಪರಿಸರದ ಜತೆಗೆ ಸುಸ್ಥಿರವಾದ ಬದುಕಿಗೆ ಪೂರಕ ಅಂಶಗಳೇ ಹೆಚ್ಚಿವೆ. ಆರೂ, ಈ ಭಾಗದ ಕೆಲವು ಜನಪ್ರತಿನಿಧಿಗಳು, ಸಂಘಟನೆ ಗಳು, ತಜ್ಞರು ವಿನಾಕಾರಣ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆಂದು ದೂರಿದರು. ಪರೋಕ್ಷವಾಗಿ ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧವೇ  ಮಾತನಾಡಿದ ಶಾಸಕ ಜೀವರಾಜ್, ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯಲ್ಲಿ ಮನುಷ್ಯನೂ ಒಂದು ಅಂಗವೆಂದು ಯಾರೂ ಪರಿಗಣಿಸಿಲ್ಲ. ಕೇವಲ ಪ್ರಾಣಿ, ಪಕ್ಷಿಗಳನ್ನು ಗಣನೆಗೆ ತೆಗೆದುಕೊಂಡು ಅಲ್ಲಿನ ಜನರನ್ನು ಬೀದಿಪಾಲು ಮಾಡುವ ಯತ್ನ ನಡೆಯುತ್ತಿದೆ. ಇರುವ ಕಾನೂನಿನ ನಡುವೆಯೇ  ಮಲೆನಾಡಿನಲ್ಲಿ ಜನರು ಬದುಕುವುದು ಕಷ್ಟಕರವಾಗಿದೆ. ಮಣ್ಣು, ಕಲ್ಲು, ಸೊಪ್ಪು ತರುವುದಕ್ಕೂ ಅರಣ್ಯ ಇಲಾಖೆ ಬಿಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೊಂದು ವರದಿ ಅಥವಾ ಕಾನೂನು ಬೇಕೆ? ವರದಿ ಒಪ್ಪಿಕೊಳ್ಳುತ್ತೇವೆ. ಆದರೆ, ಜನರ ಬದುಕುವ ಹಕ್ಕನ್ನು ಹೇಗೆ ರಕ್ಷಣೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಶಾಸಕ ಸಿ.ಟಿ. ರವಿ ಪ್ರಸ್ತಾವಿಕವಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕೃಷಿ ಬೆಲೆ ಆಯೋಗದ ಅಧ್ಯಕ್ಷ  ಪ್ರಕಾಶ್ ಕಮ್ಮರಡಿ, ಸದ್ಯಕ್ಕೆ ಪರಿಷ್ಕೃತ ವರದಿ ತಯಾರಿಕೆಗೆ ಮಾತ್ರ ಕಾಲಾವಕಾಶ ಇದೆ. ಇದನ್ನು ಬಳಕೆ ಮಾಡಿಕೊಂಡು, ಸರ್ಕಾರಗಳ ಮೇಲೆ ಒತ್ತಡ ತರಬೇಕಿದೆ. ಜನರ ಬದುಕುವ ಹಕ್ಕುಗಳಿಗೆ ಧಕ್ಕೆಯಾಗದಂತೆ ಒಂದು ವರದಿ `ವಿಷನ್ ಡಾಕ್ಯುಮೆಂಟ್' ರೂಪದಲ್ಲಿ ಬರಬೇಕಿದೆ ಎಂದರು. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಸಾಗರ ಸೇರಿದಂತೆ ವಿವಿಧೆಡೆಗಳಿಂದ ಆಸಕ್ತರು ಸಂವಾದಕ್ಕೆ ಆಗಮಿಸಿದ್ದರು.
 
ವೈಜ್ಞಾನಿಕ ವರದಿಯಲ್ಲ
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ, ಇದು ವೈಜ್ಞಾನಿಕ ವರದಿಯಲ್ಲ ಎಂದು ಆರೋಪಿಸಿದರು. ವರದಿಗೆ ಅಭಿಪ್ರಾಯ ಸಲ್ಲಿಸಲು ಏ.14ರ ತನಕ ಕಾಲಾವಕಾಶವಿದೆ. ಈ ಹಂತದಲ್ಲಿ ಸರ್ಕಾರವು ವರದಿಗೆ ಸಂಬಂಧಿಸಿದಂತೆ ಜನರಿಗೆ ಮಾಹಿತಿ ನೀಡಬೇಕು. ಕೇರಳ ಮಾದರಿಯಲ್ಲಿ ನೆಲಮಟ್ಟದ ಸಮೀಕ್ಷೆ ನಡೆಸಿ, ಜನರ ಬದುಕಿನ ವಾಸ್ತವ ದಾಖಲಿಸಿಕೊಳ್ಳಬೇಕು. ಗ್ರಾಮ ಸಭೆಗಳಲ್ಲಿ ಜನರ ಅಭಿಪ್ರಾಯ ಪಡೆಯಬೇಕು. ಆನಂತರ ಇವೆಲ್ಲ ಮಾಹಿತಿಯನ್ನು ಕೇಂದ್ರಕ್ಕೆ ನೀಡುವ ಮೂಲಕ ಪರಿಷ್ಕೃತ ವರದಿ ಜಾರಿಗೆ ಒತ್ತಾಯಿಸಬೇಕೆಂದು ಸಲಹೆ ನೀಡಿದರು.

ಸಾಕಷ್ಟು ಗೊಂದಲ


ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಮಾತನಾಡಿ, ಗಾಡ್ಗೀಳ್ ವರದಿಯ ಮುಂದುವರೆದ ಭಾಗವೇ ಕಸ್ತೂರಿ ರಂಗನ್ ವರದಿ. ಆದರೂ ಇಲ್ಲಿ ಸಾಕಷ್ಟು ಗೊಂದಲಗಳಿವೆ.
ರಾಸಾಯನಿಕ ಬಳಸಬಾರದು, ಕೃಷಿ ಭೂಮಿಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಬಾರದು, ಹೆಚ್ಚಿನ ಪ್ರಮಾಣದಲ್ಲಿ ಕಟ್ಟಡಗಳನ್ನು ಕಟ್ಟಬಾರದು ಎಂಬಂತಹ ವಿಚಾರಗಳಲ್ಲಿರುವ ಆತಂಕಗಳನ್ನು ದೂರಮಾಡಬೇಕಿದೆ ಎಂದರು. ಸುಳ್ಯ ಶಾಸಕ ಎಸ್.ಅಂಗಾರ, ಸಾಗರದ ಆನಂದ್, ಹಾಸನದ ಉದಯ್  ಕುಮಾರ್, ಕುಕ್ಕೆ ಸುಬ್ರಮಣ್ಯದ ಸೋಮಶೇಖರ್, ಕೊಡಗಿನ ಸೋಮಣ್ಣ ಮತ್ತಿತರರು ತಮ್ಮ ಅನಿಸಿಕೆ ಹಂಚಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com