
ವಿಧಾನಸಭೆ: ವಿಶ್ವ ಹಿಂದೂ ಪರಿಷತ್‍ನ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ನಗರ ಭೇಟಿ ನಿಷೇಧ ಕುರಿತಂತೆ ಬಿಜೆಪಿ ಧರಣಿ ಗುರುವಾರ ಬೆಳಗ್ಗೆಯೂ ಮುಂದುವರಿದು, ಸರ್ಕಾರದ ನಿರ್ಧಾರ ಖಂಡಿಸಿ ಸಭಾತ್ಯಾಗ ಮಾಡುವ ಮೂಲಕ ಧರಣಿ ಅಂತ್ಯ ಗೊಂಡಿತು. ಗುರುವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. `ದೇಶದ್ರೋಹಿಗಳಿಗೆ ಮಣೆ ಹಾಕುವ ಸರ್ಕಾರ, ಬಹುಸಂಖ್ಯಾತರಿಗೆ ಬರೆ ಹಾಕುತ್ತಿದೆ. ಸರ್ಕಾರದ ಸರ್ವಾಧಿಕಾರಿ ನೀತಿ ಧಿಕ್ಕಾರ' ಎಂದು ಕೂಗಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಸದನವನ್ನು 10 ನಿಮಿಷ ಮುಂದೂಡಿದರು. 15 ನಿಮಿಷದ ನಂತರ ಕಲಾಪ ಆರಂಭವಾದಾಗಲೂ ಧರಣಿ ಮುಂದುವರಿಯಿತು. ಸ್ಪೀಕರ್ ಅವರು ಸಾಕಷ್ಟು ಮನವಿ ಮಾಡಿಕೊಂಡರು. `ಸರ್ಕಾರಕ್ಕೆ ಬುದ್ದಿ ಹೇಳಿ, ಕಿವಿ ಹಿಂಡಿ' ಎಂದು ಬಿಜೆಪಿ ಸದಸ್ಯರು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡರು. ನಾನೇನು ಹೇಳೋಕೆ ಸಾಧ್ಯ ಇಲ್ಲ. ನಿಮ್ಮ ಪ್ರತಿಭಟನೆ ತೋರಿದ್ದೀರಿ ಸಾಕು ಮಾಡಿ ಎಂದು ಸ್ಪೀಕರ್ ನುಡಿದರು.
`ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ್ದು ಸರ್ಕಾರದ ಕರ್ತವ್ಯ ಹೌದು. ಆದರೆ ತೊಗಾಡಿಯಾ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಎಲ್ಲೂ ತೊಂದರೆ ಆಗಿಲ್ಲ. ಆದರೂ ನಿಷೇಧಿಸಲಾಗಿದೆ. ನಮಗೂ ಸದನ ನಡೆಯಬೇಕು, ಚರ್ಚೆ ಆಗಬೇಕು ಎಂಬ ಉದ್ದೇಶ ನಮ್ಮದೂ ಹೌದು. ಹೀಗಾಗಿ ತಮ್ಮ ಸಲಹೆ ಮೇರೆಗೆ ಸರ್ಕಾರದ ಈ ಕ್ರಮವನ್ನು ಖಂಡಿಸಿ, ಸಭಾತ್ಯಾಗ ಮಾಡುತ್ತೇವೆ' ಎಂದು ಜಗದೀಶ್ ಶೆಟ್ಟರ್ ಹೇಳಿದರು. ಬಿಜೆಪಿ ಸದಸ್ಯರು ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು.
Advertisement