ವಿಷ್ಣು ಸ್ಮಾರಕ ಜಾಗದ ಗೊಂದಲ ಇಲ್ಲ

ಚಿತ್ರನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಸ್ಮಾರಕಕ್ಕೆ ನೀಡಿರುವ ಜಾಗವು ಕಂದಾಯ ಇಲಾಖೆಗೆ ...
ವಿಷ್ಣುವರ್ಧನ್ ಸ್ಮಾರಕ
ವಿಷ್ಣುವರ್ಧನ್ ಸ್ಮಾರಕ

ವಿಧಾನಪರಿಷತ್ತು: ಚಿತ್ರನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಸ್ಮಾರಕಕ್ಕೆ ನೀಡಿರುವ ಜಾಗವು ಕಂದಾಯ ಇಲಾಖೆಗೆ ಸೇರಿದ್ದೇ ವಿನಾಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮೇಲ್ಮನೆಯಲ್ಲಿ ಸದಸ್ಯ ಅಶ್ವತ್ಥನಾರಾಯಣ ಮಾತನಾಡಿ, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕ್ಕೆ ನೀಡಿರುವ ಜಾಗದ ವಿಚಾರದಲ್ಲಿ ಗೊಂದಲವಿದೆ. ಸ್ಮಾರಕ ನಿರ್ಮಿಸಲು ಮುಖ್ಯಮಂತ್ರಿ ಶಂಕುಸ್ಥಾಪನೆ  ಮಾಡುತ್ತಾರೆ, ಅದೇ ದಿನ ವ್ಯಕ್ತಿಯೊಬ್ಬರು ತಡೆಯಜ್ಞೆ ತರುತ್ತಾರೆ. ಏಕೆ ಇಂತಹ ಗೊಂದಲ ಸೃಷ್ಟಿಯಾಯಿತು, ಗೊಂದಲ ಸೃಷ್ಟಿಸುವ ಮೂಲಕ ಮೇರು ನಟನ ಅಭಿಮಾನಿಗಳಿಗೆ ನೋವುಂಟುಮಾಡಲಾಗುತ್ತಿದೆ ಎಂದರು. ಉತ್ತರ ನೀಡಿದ ಅರಣ್ಯ ಸಚಿವ ರಮಾನಾಥ ರೈ, ವಿಷ್ಣುವರ್ಧನ್ ಸ್ಮಾರಕ ನಿರ್ಮಾ ಣಕ್ಕೆ ಮಂಜೂರು ಮಾಡಿರುವ ಭೂಮಿಯು ಮೀಸಲು ಅರಣ್ಯ ವ್ಯಾಪ್ತಿಗೆ ಬರುವುದಿಲ್ಲ. ಸ್ಮಾರಕ ನಿರ್ಮಾಣ ಮಾಡಲು ಕಂದಾಯ ಇಲಾಖೆಯು ಜಮೀನು ಕಾಯ್ದಿರಿಸಿ 2014ರ ಮಾರ್ಚ್ 5 ಮತ್ತು 2014ರ ಡಿಸೆಂಬರ್ 21ರಂದು ಆದೇಶ ಹೊರಡಿಸಿತ್ತು ಎಂದರು. ಸ್ಮಾರಕ ನಿರ್ಮಾಣಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಮೈಲಸಂದ್ರ ಗ್ರಾಮದ ಸರ್ವೆ ನಂ.22ರಲ್ಲಿ 2 ಎಕರೆ ಜಮೀನನ್ನು ಮಂಜೂರು  ಮಾಡಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ 11 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆಯನ್ನೂ ಪಡೆಯಲಾಗಿದೆ. 2014ರ ಡಿಸೆಂಬರ್ 30ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ತದನಂತರ ಸರ್ಕಾರ ಸ್ಮಾರಕಕ್ಕೆ ಮಂಜೂರುಮಾಡಿದ ಜಮೀನಿನ ವಿಚಾರದಲ್ಲಿ ಆರ್.ಶರತ್ ಬಾಬು ಎಂಬುವರು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದಾವೆ ಹೂಡಿದ್ದಾರೆ. ಸ್ಮಾರಕಕ್ಕೆ ನೀಡಲಾದ ಜಾಗವು ಕಂದಾಯ ಇಲಾಖೆಗೆ ಸೇರಿರುವುದರಿಂದ ತಡೆಯಾಜ್ಞೆ ತೆರವು ಮಾಡಲು ಪ್ರಯತ್ನಿಸುವುದಾಗಿ ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com