ಗೋಮ - ಸಿದ್ದು ಜುಗಲ್‍ಬಂದಿ!

ಅರ್ಧ ಗಂಟೆಗೂ ಹೆಚ್ಚುಕಾಲ ನಗೆಗಡಲಲ್ಲಿ ತೇಲಿದ ಮೇಲ್ಮನೆ ಸಿಎಂಗೆ ಮೈಸೂರಿನ ಮೆಸ್, ಹೋಟೆಲ್‍ಗಳ...
ಗೋಮ - ಸಿದ್ದು ಜುಗಲ್‍ಬಂದಿ!

 ವಿಧಾನಪರಿಷತ್ತು: ಬಿಜೆಪಿ ಸದಸ್ಯ ಗೋ ಮಧುಸೂದನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ನಡೆದ ಮಾತಿನ ಜುಗಲ್‍ಬಂದಿ ಸದನವನ್ನು ಬಹುಕಾಲ ನಗೆಗಡಲಲ್ಲಿ ತೇಲಿಸಿತು.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಮಸ್ಯೆ ಕುರಿತಾಗಿ ಸದಸ್ಯ ರಾಮಚಂದ್ರಗೌಡ ಎತ್ತಿದ ಪ್ರಶ್ನೆಗೆ ಉತ್ತರಿಸುವ ವೇಳೆ ಮುಖ್ಯಮಂತ್ರಿಯವರ ಮಾತಿನ ಲಹರಿ ತಮ್ಮ ಹಳೆಯ ನೆನಪಿನೆಡೆಗೆ ಹರಿಯಿತು. ಕಾರ್ಪೋರೇಟರ್, ಎಂಎಲ್‍ಸಿ, ಎಂಎಲ್‍ಎ, ಸಚಿವರಾಗಿದ್ದ ರಾಮಚಂದ್ರಗೌಡರಿಗೆ ಬೆಂಗಳೂರಿನ ಗಲ್ಲಿಗಲ್ಲಿಯ ಪರಿಚಯವೂ ಇದೆ... ಹೀಗೆಂದು ಸಿಎಂ ಹೇಳುತ್ತಿದ್ದಂತೆ, ಹೀಗೆ ಹೇಳಿದರೆ ತಪ್ಪಾಗಬಹುದು ಎಂದು ಈಶ್ವರಪ್ಪ ಕಿಚಾಯಿಸಿದರು. ಅಲ್ಲಿಂದ ಆರಂಭವಾದ ಮಾತಿನ ಓಘ ಅರ್ಧಗಂಟೆ ಕಾಲ ನಿಲ್ಲಲೇ ಇಲ್ಲ.ನನಗೂ ಗಲ್ಲಿ, ಬೀದಿ ಪರಿಚಯವಿದೆ. ಮೈಸೂರಿನಲ್ಲಿ ಒಂದೂವರೆ ಆಣೆ ಹೆಸರಿನ ಗಲ್ಲಿ ಇತ್ತು. ಅಲ್ಲಿ ಎಲ್ಲ ವಸ್ತುವೂ ಒಂದೂವರೆ ಆಣೆಗೆ ಸಿಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ, ಮೂರು ಮುಕ್ಕಾಲು ಆಣೆ ಥಿಯೇಟರ್ ಬಗ್ಗೆ ರಾಮಚಂದ್ರಗೌಡ ನೆನಪು ಮಾಡಿಕೊಂಡರು.

ಒಂದೂವರೆ ಆಣೆ ಗಲ್ಲಿ ಇದ್ದರೂ ಅಲ್ಲಿ ಖರೀದಿಸುವ ವಯಸ್ಸು ನನ್ನದಾಗಿರಲಿಲ್ಲ, ಈಗ ಹಾಗಿಲ್ಲ. ಅಂದು ನಾಲ್ಕಾಣೆಯೇ ದೊಡ್ಡದು. ನಾಲ್ಕಾಣೆ ಜೋಬಿನಲ್ಲಿದ್ದರೆ ಜೇಬು ತುಂಬ ದುಡ್ಡಿದ್ದ ಭಾವನೆ ಇರುತ್ತಿತ್ತು. ಅಂದು ಮೈಸೂರಿನಲ್ಲಿ ರಾಜು ಹೋಟೆಲ್, ಮೈಲಾರಿ ಹೋಟೆಲ್, ಗುರುಮಲ್ಲು ಚಪಾತಿ ಹೋಟೆಲ್ ಭಾರೀ ಫೇಮಸ್ಸು. ಇದು ಮಧುಸೂದನ್ ಅವರಿಗೂ ಗೊತ್ತಿರ ಬೇಕು ಎಂದರು ಸಿಎಂ.

ಶ್ರೀ ಹೋಟೆಲ್, ತೇಗು ಮೆಸ್ ನಿಮಗೆ ಗೊತ್ತಿರಬೇಕಲ್ಲ ಎಂದು ಮುಖ್ಯಮಂತ್ರಿಯವರನ್ನು ಮಧುಸೂದನ್ ಕಿಚಾಯಿಸಿದಾಗ, ತಮಗೆ ಅಲ್ಲಿಗೆ ಹೋದ ಅನುಭವ ಇರಬೇಕು ಎಂದು ಮಧುಸೂದನ್ ಅವರ ಕಾಲೆಳೆದರು. ತೇಗು ಮೆಸ್ ಬಹಳ ಫೇಮಸ್. ಶ್ರೀ ಹೋಟೆಲ್ ನಾನ್‍ವೆಜ್‍ಗೆ ಹೆಸರುವಾಸಿ ಎಂದು ಸಿಎಂ ಹೇಳುತ್ತಿದ್ದಂತೆ, ನೀವು ಸದನಕ್ಕೆ ಬಹಳ ಆಸೆ ಹುಟ್ಟಿಸುತ್ತಿದ್ದೀರಾ ಎಂದು ಈಶ್ವರಪ್ಪ ಹೇಳಿದಾಗ ಸಭೆಯಲ್ಲಿ ಭಾರೀ ನಗು. ಹಾಗೆಯೇ ಮಂಡಿಮೊಹಲ್ಲಾದ ಹನುಮಂತು ಹೋಟೆಲ್ ಮುಂದೆ ಬೆಳಿಗ್ಗೆ 7 ಗಂಟೆಗೆ ಕ್ಯೂ ಇರುತ್ತದೆ ಎಂದಾಗ ಮಧುಸೂದನ್ ಹೌದೌದು, ನಾನೇನು ಹೋಗಿಲ್ಲ ಎಂದು ನಕ್ಕರು.

ಸತ್ತು ಮೇಲೆ ಹೋದಾಗ ಏನೇನು ತಿಂದಿದ್ದಿ, ಏನೆಲ್ಲಾ ಅನು ಭವಿಸಿದ್ದೀ ಎಂದು ಅಲ್ಲಿ ಕೇಳುತ್ತಾರೆ. ಕಾಲು ಸೂಪ, ತಲೆ ಮಾಂಸ ಎಲ್ಲ ತಿಂದಿಲ್ಲ ಎಂದರೆ ವಾಪಸ್ ಕೆಳಗೆ ಹೋಗಿ ತಿಂದು, ಅನುಭವಿಸಿ ವಾಪಸ್ ಬಾ ಅಂತ ಕಳಿಸ್ತಾರೆ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಂತೆ, ನೀವು ಈಗ ಹಾಗೆ ವಾಪಸ್ ಬಂದವರು ಇರಬೇಕೇನೋ ಎಂದು ಚಟಾಕಿ ಹಾರಿಸಿದರು.

ಈ ಮಧುಸೂದನ್ ಮೈಸೂರಿನಲ್ಲಿ ಹುಟ್ಟಿದ್ದೇ ಸರಿ ಇಲ್ಲ ಎಂದು ಸಿಎಂ ಹೇಳಿದಾಗಲಂತೂ ಇಡೀ ಸದನ ಬಿದ್ದುಬಿದ್ದು ನಕ್ಕಿತು. ಆರ್‍ಎಸ್‍ಎಸ್‍ಗೆ ಹೋಗಿ ಹೆಚ್ಚಿಗೆ ತಿಳ್ಕೊಂಡು ಬಿಟ್ಟಿದಾರೆ ಎಂದು ಸಿಎಂ ಹೇಳಿದಾಗ, ಆರ್‍ಎಸ್‍ಎಸ್‍ಗೆ ಹೋಗಿದ್ದರಿಂದ ಮಧುಸೂದನ್ ಸುಧಾರಿಸಿದ್ದಾರೆ. ಇಲ್ಲವಾದರೆ ಮೈಸೂರಿನ ಕತೆಯೇ ಬೇರೆಯಾಗುತ್ತಿತ್ತು ಎಂದು ಈಶ್ವರಪ್ಪ ಗೇಲಿಮಾಡಿದರು. ನೀವು(ಸಿಎಂ) ಹೇಳಿಕೊಟ್ಟಿದ್ದನ್ನು ಕೇಳಬೇಡ ಎಂದು ಪದೇ ಪದೆ ಮಧುಸೂದನ್‍ಗೆ ಹೇಳುತ್ತೇನೆ. ನೀವು ಹೇಳಿದ 10 ಅಂಶಗಳ ಪೈಕಿ 9ನ್ನು ಪಾಲಿಸಲ್ಲ, ಒಂದನ್ನು ಮಾಡಿಬಿಡುತ್ತಾನೆ ಎಂದು ಈಶ್ವರಪ್ಪ ಮತ್ತೆ ಕಾಲೆಳೆದರು.

ಒಟ್ಟಾರೆ ಸುಮಾರು ಅರ್ಧತಾಸು ಸಿಎಂ, ಪ್ರತಿಪಕ್ಷ ನಾಯಕರಾದಿಯಾಗಿ ಸದಸ್ಯರೆಲ್ಲಾ ನಗೆಗಡಲಲ್ಲಿ ತೇಲಿದರು. ಈ ವೇಳೆಗೆ ಈಶ್ವರಪ್ಪ ಇಷ್ಟೊಂದು ನಕ್ಕಿದ್ದು ನಾನು ನೋಡೆ ಇಲ್ಲ ಎಂದು ಸಭಾನಾಯಕರು ಹೇಳಿದಾಗ, ನಾನು ಬಂದಾಗಲೆಲ್ಲಾ ಈಶ್ವರಪ್ಪ ನಗುತ್ತಲೇ ಇರುತ್ತಾರೆ ಎಂದು ಸಿಎಂ ಹೇಳುವುದರೊಂದಿಗೆ ನಗೆ ಪ್ರಹಸನಕ್ಕೆ ತೆರೆ ಎಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com