ಮೀಸಲಿನಲ್ಲಿ ವಂಚನೆ: ಕ್ರಮಕ್ಕೆ ಒತ್ತಾಯಿಸಿ ಪ್ರತಿಪಕ್ಷ ಸಭಾತ್ಯಾಗ

ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಿನಲ್ಲಿ ವಂಚನೆ...
ಮೀಸಲಿನಲ್ಲಿ ವಂಚನೆ: ಕ್ರಮಕ್ಕೆ ಒತ್ತಾಯಿಸಿ ಪ್ರತಿಪಕ್ಷ ಸಭಾತ್ಯಾಗ
Updated on

ವಿಧಾನಪರಿಷತ್ತು: ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಿನಲ್ಲಿ ವಂಚನೆ ನಡೆದಿದೆ, ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿಯ ಸದಸ್ಯರು ಸಭಾತ್ಯಾಗ ನಡೆಸಿದ ಪ್ರಸಂಗ ಮೇಲ್ಮನೆಯಲ್ಲಿ ನಡೆಯಿತು.

ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಕೆ.ಎಸ್. ಈಶ್ವರಪ್ಪ, ಶಾಣಪ್ಪನವರು ವಿಷಯ ಪ್ರಸ್ತಾಪಿಸಿ, ಹಿಂದುಳಿದ ವರ್ಗ ಪ್ರವರ್ಗ `ಎ'ಗೆ ಸಿಗಬೇಕಾದ ಮೀಸಲು ತಪ್ಪಿಸಲು ದೊಡ್ಡ ಷಡ್ಯಂತ್ರ ನಡೆದಿದೆ. ಮೀಸಲು ಕಲ್ಪಿಸಿ ಶಾಸನ ಮಾಡಿ ಅಧಿಸೂಚನೆ ಹೊರಡಿಸಿದ್ದರೂ ಸರ್ಕಾರದಿಂದ ಅದನ್ನು ಈ ಬಾರಿ ಅನುಷ್ಠಾನ ಮಾಡಲಾಗುತ್ತಿಲ್ಲ. ಹೀಗಾಗಿ ಸಾವಿರಾರು ಜನರು ಮೀಸಲು ಸೌಲಭ್ಯದಿಂದ ವಂಚಿತರಾಗುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಒಂದು ಹಂತದಲ್ಲಿ ಸಹಕಾರ ಸಚಿವ ಎಚ್. ಎಸ್.ಮಹದೇವ ಪ್ರಸಾದ್ ಮೇಲೆ ಎರಗಿದ ಬಿ.ಜೆ.ಪುಟ್ಟಸ್ವಾಮಿ, ನಿಮ್ಮಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗುತ್ತಿದೆ. ನೀವು ಅಧಿಕಾರದಲ್ಲಿರಲು ಲಾಯಕ್ಕಲ್ಲ. ಕೂಡಲೇ ಕ್ಯಾಬಿನೆಟ್‍ನಿಂದ ನಿಮ್ಮನ್ನು ಕೈಬಿಡಿ ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸುತ್ತೇನೆ ಎಂದು ಹೇಳಿದರು. ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಶಾಸನ ರಚನೆಯಾದರೂ ಅದನ್ನು ಅನುಷ್ಠಾನಕ್ಕೆ ತರಲು ಎಡವಲಾಗಿದೆ. ಈ ತಪ್ಪನ್ನು ಹೇಗೆ ಸರಿಪಡಿಸುತ್ತಿರಾ ಮತ್ತು ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಏನು ಕ್ರಮಕೈಗೊಳ್ಳುತ್ತೀರಿ ಹೇಳಿ ಎಂದು ಪಟ್ಟು ಹಿಡಿದರು.

ಟಿ ಬಿಜೆಪಿ ತರಾಟೆ ಕಾಂಗ್ರೆಸ್‍ನ ರೇವಣ್ಣ, ಉಗ್ರಪ್ಪ, ಬಿಜೆಪಿಯ ಸಿದ್ದ ರಾಮಣ್ಣ ಅವರು ಸರ್ಕಾರದ ಉದಾಸೀನತೆ ಬಗ್ಗೆ ಕಿಡಿಕಾರಿದರಲ್ಲದೆ ಮುಂದೆ ಏನು ಮಾಡಬೇಕು ಎಂದು ಸಲಹೆ ನೀಡಿ ದರು. ಅಂತಿಮವಾಗಿ ಉತ್ತರಿಸಿದ ಸಚಿವರು, 2015ನೇ ಮಾರ್ಚ್ ಅಂತ್ಯಕ್ಕೆ 7,866 ಪ್ರಾಥಮಿಕ ಹಂತದ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕಾಗಿದೆ. ಈ ಪೈಕಿ ಈಗಾಗಲೇ 4,837 ಸಂಘಗಳಿಗೆ ಚುನಾವಣೆ ನಡೆದಿದೆ. ಫೆ.14 ರಂದು ನಿಗದಿಗೊಳಿಸಲಾದ 706 ಸಂಘಗಳೂ ಸೇರಿ 3029 ಸಂಘಗಳ ಆಡಳಿತ ಮಂಡಳಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಲು ಅವಕಾಶವಿರುತ್ತದೆ.

ಈಗಾಗಲೇ ಚುನಾವಣೆ ನಡೆದಿರುವ ಸಂಘಗಳಿಗೆ ಐದು ವರ್ಷದ ತರುವಾಯ ನಡೆಯುವ ಚುನಾ ವಣೆ ವೇಳೆಯಲ್ಲಿ ಮೀಸಲಲ್ಲಿ ಆದ್ಯತೆ ನೀಡಲಾಗುತ್ತದೆ. ಆತಂಕ ಬೇಡ. ಇದಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಜಾಯಿಷಿ ನೀಡಿದರು. ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷದ ಸದಸ್ಯರು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಈ ಬಾರಿ ಚುನಾವಣೆ ವೇಳೆ ಮೀಸಲು ನಿಗದಿಪಡಿಸದ ಕಾರಣ ಸಾವಿರಾರು ಜನರಿಗೆ ವಂಚನೆಯಾದಂತಾಗಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಏನು ಮತ್ತು ಯಾವ ಕ್ರಮಕೈಗೊಳ್ಳುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

ಮೊದಲು ಪುಟ್ಟಸ್ವಾಮಿ, ನಂತರ ವೀರಯ್ಯ ಸದನದಿಂದ ಹೊರ ನಡೆದರು. ಕೆಲ ಹೊತ್ತಿನ ನಂತರ ಈಶ್ವರಪ್ಪನವರ ನೇತೃತ್ವದಲ್ಲಿ ಉಳಿದ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com