ಪ್ರಜ್ಞಾಪೂರ್ವಕವಾಗಿಯೇ ಮಾತಾಡಿದ್ದೇನೆ: ಸ್ಪೀಕರ್

ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಅವರು ಹೇಳಿದ್ದನ್ನೇ ನಾನು ಹೇಳಿದ್ದೇನೆ...
ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಂಗ್ರಹ ಚಿತ್ರ)
ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಅವರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ವಾಸ್ತವವನ್ನು ಬಿಚ್ಚಿಟ್ಟಿದ್ದೇನೆ. ನನ್ನ ಹುದ್ದೆಯಲ್ಲಿದ್ದುಕೊಂಡು ಏನು ಹೇಳಬೇಕೋ ಅದರ ವ್ಯಾಪ್ತಿಯಲ್ಲೇ ಮಾತನಾಡಿದ್ದೇನೆ. ಇದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಇದು ವಿರೋಧದ ಮಾತಲ್ಲ. ಹೇಗೆ ತಿಳಿದುಕೊಂಡಿದ್ದಾರೆ ಎಂಬುದು ಅವರವರ ಚಿಂತನೆ ಮತ್ತು ರುಚಿಗೆ ಸಂಬಂಧಿಸಿದ್ದು ಅಷ್ಟೇ...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ನಿಮ್ಮ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಿದ್ದಾರಂತಲ್ಲ ಎಂಬ ಪ್ರಶ್ನೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ತಮ್ಮದೇ ಹರಿತವಾದ ಧಾಟಿಯಲ್ಲಿ ನೀಡಿದ ಪ್ರತಿಕ್ರಿಯೆ ಇದು.

ನಾನೇನು ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕನಾಗಿ ಮಾತನಾಡುತ್ತಿಲ್ಲ. ನನ್ನ ಹುದ್ದೆಯಲ್ಲಿದ್ದು, ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ಕಟುವಾಗಿಯೂ ಹೇಳುತ್ತಿಲ್ಲ. ನನ್ನ ಧಾಟಿಯೇ ಹೀಗೆ. ನನಗೆ ಯಾವುದೇ ಹುದ್ದೆ ಕೊಟ್ಟರೂ ಹೀಗೇ. ಶಾಸಕನಾಗಿದ್ದರೆ ಪ್ರತಿ ದಿನ ಫೈಲ್‌ಗಳನ್ನು ಹಿಡಿದು ವಿಧಾನಸೌಧದಲ್ಲಿ ಅಲೆಯುತ್ತಿದ್ದೆ. ರಾಜಕೀಯ ಅಂದರೆ ಬ್ಯುಸಿನೆಸ್ ಅಲ್ಲ. ಸಾಮಾಜಿಕ ಸೇವಾ ಕ್ಷೇತ್ರ. ಪ್ರಜ್ಞೆ ಬಿಟ್ಟು ಮಾತನಾಡೊಲ್ಲ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಮಂಗಳವಾರ ಉತ್ತರಿಸಿದರು.

ಹೈಕಮಾಂಡ್‌ಗೆ ಯಾರು ಪತ್ರ ಬರೆದಿದ್ದಾರೋ ಏನೋ ನನಗೆ ಗೊತ್ತಿಲ್ಲ. ಅದರ ಬಗ್ಗೆ  ತಲೆಕೆಡಿಸಿಕೊಳ್ಳೊಲ್ಲ. ನನ್ನ ಹಾದಿಯಲ್ಲೇ ಮುಂದುವರೆಯುತ್ತೇನೆ. ಶಾಸಕರು ತಮ್ಮ ಕ್ಷೇತ್ರ ಅಥವಾ ಯಾವುದೇ ಇಲಾಖೆಯಲ್ಲಿ ತೊಂದರೆ ಆಗುತ್ತಿದ್ದರೆ ಅವರು ಬಾಯಿ ಬಿಡಬೇಕು. ಅವರ ಹೇಳಬೇಕು. ಎಲ್ಲವನ್ನು ನಾನು ಹೇಳೋಕೆ ಆಗುತ್ತದಾ? ಎಂದು ಮರು ಪ್ರಶ್ನಿಸಿದರು.

ಬಗರ್‌ಹುಕುಂಗೆ ಸಮ್ಮತಿ
ಅರಣ್ಯ ಭೂಮಿ ಹೊರತಾದ ಬಗರ್ ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಲು ಕಂದಾಯ ಇಲಾಖೆ ಸಮ್ಮತಿಸಿದೆ. 50-53ರಂತೆ ಅರ್ಜಿ ಸಲ್ಲಿಸಿದವರ ಭೂಮಿ ಅರಣ್ಯ ವ್ಯಾಪ್ತಿಗೆ ಬಾರದಿದ್ದರೆ ಆ ಅರ್ಜಿಯನ್ನು ವಿಲೇವಾರಿ ಮಾಡುವ ಕಾರ್ಯ ಕೂಡಲೇ ಪ್ರಾರಂಭವಾಗುತ್ತದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದರು. ಕಂದಾಯ ಇಲಾಖೆ ಕಾರ್ಯದರ್ಶಿ ಈ ಆದೇಶದ ಪ್ರತಿಯನ್ನು ಇಂದು ನನಗೆ ಕೊಟ್ಟು ಹೋಗಿದ್ದಾರೆ. ಕಾನೂನು ಇಲಾಖೆಯ ಸಮ್ಮತಿಯೂ ಲಭಿಸಿದೆ. ಬಗರ್ ಹುಕುಂನಲ್ಲಿ ಸುಮಾರು 7 ಲಕ್ಷ ಅರ್ಜಿಗಳಿದ್ದು, ಈ ಆದೇಶದಂತೆ ಸುಮಾರು2 ಲಕ್ಷ ಅರ್ಜಿಗಳು ವಿಲೇವಾರಿ ಆಗುತ್ತವೆ. ಆರು ತಿಂಗಳಿಂದ ನಡೆಸಿದ ಹೋರಾಟಕ್ಕೆ ಇದೀಗ ಜಯ ದೊರೆತಂತಾಗಿದೆ.

ಪೂಜಾರಿ ರಾಜಕೀಯಕ್ಕೆ ಯಾವಾಗ ಬಂದರು ಅಂತ ನನಗೆ ಗೊತ್ತಿಲ್ವಾ? ಅದಕ್ಕೆ ಮುನ್ನ ಲಾಯರ್ ಆಗಿದ್ದವರು. ಅದಕ್ಕೆಲ್ಲ ಪ್ರತಿಕ್ರಿಯಿಸಲ್ಲ. ನನಗೆ ಯಾವ ಹುದ್ದೆ ಕೊಟ್ಟರೂ ನಿಭಾಯಿಸುತ್ತೇನೆ.
-ಕಾಗೋಡು ತಿಮ್ಮಪ್ಪ, ಸ್ಪೀಕರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com