
ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಸಿಬಿಐ ವಿಶೇಷ ಅಧಿಕಾರಿಗಳಿಂದ ಬಂಧಿತರಾಗಿದ್ದ ಶಾಸಕ ಆನಂದ್ ಸಿಂಗ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಬಳ್ಳಾರಿಯ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಶೂರಿಟಿ, ಜಾಮೀನಿನ ಬಳಿಕ ಸಾಕ್ಷ್ಯಾಧಾರ ನಾಶಪಡಿಸದಂತೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳ ಮೇರೆಗೆ ಶಾಸಕ ಆನಂದ್ ಸಿಂಗ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ವಿಜಯನಗರ ಶಾಸಕ ಆನಂದ್ ಸಿಂಗ್ ವಿರುದ್ಧ ಒಟ್ಟು 3 ಪ್ರಕರಣಗಳು ದಾಖಲಾಗಿತ್ತು. ಈ ಪೈಕಿ 1 ಪ್ರಕರಣವನ್ನು ಹೊರತು ಪಡಿಸಿ ಉಳಿದ ಎರಡೂ ಪ್ರಕರಣಗಳಲ್ಲಿ ಜಾಮೀನು ಆನಂದ್ ಸಿಂಗ್‌ಗೆ ಜಾಮೀನು ದೊರೆತಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಉಳಿದ ಒಂದು ಪ್ರಕರಣದ ಜಾಮೀನು ಪ್ರಕ್ರಿಯೆ ತಡವಾಗಿತ್ತು. ಇದೀಗ ನ್ಯಾಯಾಲಯ ಜಾಮೀನು ನೀಡಿದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಎಲ್ಲಾ ಆರೋಪಿಗಳಿಗೆ ಇದೀಗ ಜಾಮೀನು ದೊರೆತಂತಾಗಿದೆ. ಕಳೆದ 2013 ಅಕ್ಟೋಬರ್ 17ರಂದು ಶಾಸಕ ಆನಂದ್ ಸಿಂಗ್ ಅವರನ್ನು ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
Advertisement