
ವಿಧಾನಸೌಧ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕ್ರಿಕೆಟ್ ಬೆಟ್ಟಿಂಗ್ ದಂಧೆ ಕುರಿತ ತನಿಖೆ ಯನ್ನು ಸಿಬಿಐಗೆ ವಹಿಸಲು ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಸುವರ್ಣ ನ್ಯೂಸ್-ಕನ್ನಡಪ್ರಭ ಬಯಲಿಗೆಳೆದಿದ್ದ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕುರಿತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಶುಕ್ರವಾರ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಅದಕ್ಕೆ ಉತ್ತರಿಸಿದ ಸಚಿವ ಜಾರ್ಜ್, ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರ ಯಾರನ್ನೂ ರಕ್ಷಿಸುವ ಪ್ರಯತ್ನ ನಡೆಸಿಲ್ಲ. ರಾಜ್ಯಾದ್ಯಂತ ಈ ಹಗರಣದ ಜಾಲ ವ್ಯಾಪಿಸಿದ್ದು, ಈಗಾಗಲೇ ರಾಜ್ಯ ಸರ್ಕಾರ ಅಕ್ರಮ ಲಾಟರಿ ದಂಧೆ ಹಾಗೂ ಓಸಿ ಮತ್ತು ಮಟ್ಕಾ ದಂಧೆಯ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ್ದು, ನೀವು (ಪ್ರತಿಪಕ್ಷಗಳು) ಬಯಸಿದರೆ ಈ ಪ್ರಕರಣವನ್ನೂ ಸಿಬಿಐಗೆ ವಹಿಸಲು ಸಿದ್ಧ ಎಂದು ಘೋಷಿಸಿದರು. ವಿಷಯ ಪ್ರಸ್ತಾಪಿಸಿದ ಶೆಟ್ಟರ್, ಈ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಸ್ಪೀಕರ್ ಅವರನ್ನು ಕೋರಿದರು. ಹಗರಣ ಬಯಲಿಗೆಳೆದ ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿದ ಅವರು, ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡರು. ಇಂತಹ ಪ್ರಕರಣ ಬಯಲಿಗೆಳೆದ ಸುವರ್ಣ ನ್ಯೂಸ್ ಚಾನೆಲ್ ಗೆ ಪ್ರೋತ್ಸಾಹ ನೀಡುವ ಬದಲು ರಾಜ್ಯ ಸರ್ಕಾರ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಈ ವಿಷಯದ ಮೇಲೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಇಲ್ಲ. ಆದ್ರೆ, ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
Advertisement