ಸರ್ಕಾರದ ವಿರುದ್ಧ ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡನೆ

ಪ್ರಧಾನ ಪ್ರತಿಪಕ್ಷ ಬಿಜೆಪಿ ಬೆಂಬಲವಿಲ್ಲದೆಯೇ ಸರ್ಕಾರದ ವಿರುದ್ಧ ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಈ ಪ್ರಸ್ತಾಪವನ್ನು ಚರ್ಚೆಗೆ ಅಂಗೀಕರಿಸಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ವಿಧಾನಸಭೆ: ಪ್ರಧಾನ ಪ್ರತಿಪಕ್ಷ ಬಿಜೆಪಿ ಬೆಂಬಲವಿಲ್ಲದೆಯೇ ಸರ್ಕಾರದ ವಿರುದ್ಧ ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಈ ಪ್ರಸ್ತಾಪವನ್ನು ಚರ್ಚೆಗೆ ಅಂಗೀಕರಿಸಿದ್ದಾರೆ.

ಭೋಜನ ವಿರಾಮದ ಬಳಿಕ ಕಲಾಪ ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ಮಂಡಿಸಿ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರಿನ ಆವರಣದಲ್ಲಿ ಧರಣಿ ನಡೆಸಿ ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿದ್ದರು. ಈ ಗದ್ದಲದ ಮಧ್ಯೆಯೇ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಜೆಡಿಎಸ್ ಮಂಡಿಸಿದ ನಿರ್ಣಯದ ಪರವಾಗಿ ಹಾಜರಿದ್ದಾರೆ ಎಂದು ಪ್ರಶ್ನಿಸಿದಾಗ 28 ಶಾಸಕರು ಎದ್ದು ನಿಂತರು. ನಿರ್ಣಯದ ಪರವಾದ ಪ್ರಸ್ತಾಪಕ್ಕೆ 33 ಶಾಸಕರು ಸಹಿ ಹಾಕಿದ್ದು, ಆ ಪೈಕಿ 22 ಮಂದಿ ಹಾಜರು ಇರಬೇಕಾದ ನಿಯಮವಿದೆ. 28 ಜನರು ಹಾಜರಿದ್ದರಿಂದ ಪ್ರಸ್ತಾಪವನ್ನು ಚರ್ಚೆಗೆ ಅಂಗೀಕರಿಸಿದರು.

ಎಚ್ ಡಿಕೆ-ಸಿಎಂ ವಾಗ್ವಾದ:
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ನಿಮಯ ಪ್ರಕಾರ  ನಿರ್ಣಯ ಮಂಡಿಸಿದ ಮೂರು ದಿನಗಳೊಳಗಾಗಿ ಚರ್ಚೆಗೆ ಅವಕಾಶ ನೀಡಿದರೂ ನಾವು ಚರ್ಚೆಗೆ ಸಿದ್ಧ ಎಂದರು.

ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂದು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಸರ್ಕಾರ, ಸಚಿವರು ಮತ್ತು ನಮ್ಮ ಸಂಪುಟದ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದಾದ ಮೇಲೆ ಆ ವಿಚಾರವನ್ನು ಮೊದಲು ಇತ್ಯರ್ಥಗೊಳಿಸಬೇಕು. ಈ ಬಗ್ಗೆ ವಿಳಂಬ ಮಾಡುವುದು ಬೇಡ, ತಕ್ಷಣ ಚರ್ಚೆ ಆರಂಭ ಮಾಡೋಣ ಎಂದು ಸವಾಲು ಹಾಕಿದರು. ನಾವು ಕೂಡಾ ಈ ಕ್ಷಣದಿಂದ ಚರ್ಚೆಗೆ ಸಿದ್ಧ. ಆದರೆ, ಸಭಾಧ್ಯಕ್ಷರು ನಿಯಮ ಪ್ರಕಾರ ಮೂರು ದಿನಗಳ ಅವಕಾಶ ನೀಡಿದ್ದಾರೆ. ಅವರ ಒಪ್ಪಿಗೆ ಪ್ರಕಾರ ನಾವು ಚರ್ಚೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಉತ್ತರಿಸಿದರು.

ಬಿಜೆಪಿ ವಿರೋಧ: ಆದರೆ ಬಿಜೆಪಿ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಸುವುದಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೀರಿ. ಈ ಬಗ್ಗೆ ನಾವು ಮೊದಲು ನಿಲುವಳಿ ಸೂಚನೆ ಮಂಡಿಸಿದ್ದೇವೆ. ರೈತರ ಆತ್ಮಹತ್ಯೆ ಪ್ರಕರಣವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಹೀಗಾಗಿ ಸದನದಲ್ಲಿ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ಮತ್ತೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವಿಶ್ವಾಸ ನಿರ್ಣಯದ ಬಗೆಗಿನ ಚರ್ಚೆಯನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು. ಸರ್ಕಾರದ ಬಗ್ಗೆ ಅವರು ವಿಶ್ವಾಸ ಇಲ್ಲ ಎಂದು ಹೇಳಿದ್ದಾರೆ. ನಾವು ಉತ್ತರ ನೀಡುವುದಕ್ಕೆ ಸಿದ್ಧ. ರೈತರ ಸಮಸ್ಯೆ ಬಗ್ಗೆ ಮತ್ತೆ ಚರ್ಚೆ ಮಾಡೋಣ ಎಂದರು.

ಆಡಳಿತ ಪಕ್ಷದ ಸಿ.ಎಸ್. ನಾಡಗೌಡ, ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಮಾಡಲು ಯಾವುದೇ ಮಿತಿ ಇಲ್ಲ. ಇದಕ್ಕೆ ಆಕಾಶವೇ ಮಿತಿ. ಆ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಕೂಡ ಪ್ರಸ್ತಾಪಿಸಬಹುದು ಎಂದರು.

ಸಿಟ್ಟಿಗೆದ್ದ ಸಿಎಂ
: ಉಭಯ ಪಕ್ಷಗಳ ವರ್ತನೆಯಿಂದ ಸಿಟ್ಟಿಗೆದ್ದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜಕೀಯ ಮಾಡುವ ಉದ್ದೇಶದಿಂದ ಈ ವಿಷಯ ಪ್ರಸ್ತಾಪಿಸಿದ್ದಾರೆ. ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ. ಕೇಂದ್ರ ಸರ್ಕಾರಕ್ಕೆ ನಾವು ಸೂಕ್ತ ನೆರವು ನೀಡುವಂತೆ ಕೈ ಜೋಡಿಸಿ ಕೇಳಿದ್ದೇವೆ. ಆದರೆ,  ಕೇಂದ್ರ ನೆರವಿಗೆ ಬಂದಿಲ್ಲ ಎಂದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನೈತಿಕ ರಾಜಕಾರಣ: ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ ಬಿಜೆಪಿಯ ಬಸವರಾಜ್ ಬೊಮ್ಮಾಯಿ, ರೈತರ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಇದು ಕೇಂದ್ರ ಮತ್ತು ರಾಜ್ಯದ ಪ್ರಶ್ನೆಯಲ್ಲ. ಪಕ್ಷಾತೀತವಾಗಿ ಚರ್ಚೆಯಾಗಬೇಕು. ಇದು ನನ್ನ ಕಳಕಳಿಯ ಮನವಿ. ಆದರೆ, ಸಿದ್ದರಾಮಯ್ಯನವರ ಮಾತಿಗೆ ನನ್ನ ಆಕ್ಷೇಪವಿದೆ.

ಹಾಗಾದರೆ ಸಿಎಂ ಅವರು ಈ ಭಾಗದಲ್ಲಿ ಕುಳಿತು ರೈತರ ಸಮಸ್ಯೆ ಬಗ್ಗೆ ಮಾತನಾಡಿದ್ದು ರಾಜಕಾರಣಕ್ಕಾಗಿಯೇ? ನಾವು ಈಗ ರೈತರಿಗೆ ನೈತಿಕ ಸ್ಥೈರ್ಯ ತುಂಬಬೇಕು. ಇದಕ್ಕಾಗಿ ನಾವು ರಾಜಗಕಾರಣ ಮಾಡುತ್ತೇವೆ. ನೀವೇನು ಮಾಡುತ್ತಿರೀ?  ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರ ಹೆಸರನ್ನು ಎತ್ತಿ ಆರೋಪ-ಪ್ರತ್ಯಾರೋಪ ನಡೆಸಿದರು. ಕೊನೆಗೆ ಸ್ಪೀಕರ್ ಸೂಚನೆ ಮೇರೆಗೆ ರಾಷ್ಟ್ರೀಯ ನಾಯಕರ ಹೆಸರನ್ನು ಕಡತದಿಂದ ತೆಗೆದು ಹಾಕಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com