
ಬೆಂಗಳೂರು: ರೈತರ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ಈಗ ಅಖಾಡಕ್ಕೆ ಇಳಿದಿದ್ದು, ರೈತರು ಬ್ಯಾಂಕ್ ನಿಂದ ಪಡೆದ ಸಾಲವನ್ನು ಕನಿಷ್ಠ ಒಂದು ವರ್ಷ ವಸೂಲಿ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸೋಮವಾರ ಮಾತನಾ ಡಿದ ಅವರು, ಕಾಂಗ್ರೆಸ್ ಮತ್ತು ಸರ್ಕಾರ ರೈತ ಸಮುದಾಯದ ಜತೆಗಿದೆ. ನಿಮ್ಮ ಕಷ್ಟವನ್ನು ಹಂಚಿಕೊಳ್ಳುವುದಕ್ಕೆ ನಾವು ನಿಮ್ಮೊಂದಿಗೆ ಇದ್ದೇವೆ. ರೈತ ಸಹೋದರರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬಾರದು ಎಂದು ಮನವಿ ಮಾಡಿದರು.
ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೆ 68 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷದ ಪರವಾಗಿ ನಾನು ಕೆಲ ಮನವಿ ಮಾಡಿಕೊಳ್ಳುತ್ತೇನೆ. ರೈತರು ಸಂಕಷ್ಟದಲ್ಲಿರುವು ದರಿಂದ ಅವರು ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ಕನಿಷ್ಠ 1 ವರ್ಷದವರೆಗೆ ವಸೂಲು ಮಾಡಬಾರದು. ರಾಷ್ಟ್ರೀಯ ಮತ್ತು ಸಹಕಾರಿ ಬ್ಯಾಂಕ್ ಗಳಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ರೈತರ ಖಾಸಗಿ ಸಾಲವನ್ನು ಬ್ಯಾಂಕ್ ಸಾಲವಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮೀಟರ್ ಬಡ್ಡಿ ವ್ಯವಹಾರದಿಂದ ರೈತರಿಗೆ ತೊಂದರೆಯಾಗುತ್ತಿದೆ. ಸಾಲಕೊಟ್ಟವರು ರೈತರಿಗೆ ಬೆದರಿಕೆ ಹಾಕಿ ತೊಂದರೆ ಕೊಡುತ್ತಾರೆ. ಮರ್ಯಾದೆಗೆ ಅಂಜಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಸರ್ಕಾರ ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಎಂದು ಆಗ್ರಹಿಸಿದರು. ನಾನು ಸರ್ಕಾರದ ಮೇಲಿನ ಭರವಸೆಯನ್ನು ಕಳೆದುಕೊಂಡಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಸಾಧ್ಯವೇ? ಸರ್ಕಾರದ ನೀತಿ-ನಿಯಮದ ಚೌಕಟ್ಟಿನಲ್ಲಿ ಸಾಕಷ್ಟು ಸಹಾಯ ಮಾಡಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕಬ್ಬು ಬೆಳೆಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಸರ್ಕಾರ ಇಲ್ಲಿಯವರೆಗೆ ರು.1,552 ಕೋಟಿಯನ್ನು ಕಬ್ಬು ಬೆಳೆಗಾರರಿಗೆ ವಿವಿಧ ಸಹಾಯಧನ ರೂಪದಲ್ಲಿ ನೀಡಿದೆ. ಬೆಳಗಾವಿ ಅಧಿವೇಶನದಲ್ಲಿ ನೀಡಿದ ಭರವಸೆ ಪ್ರಕಾರ ರು.350 ಕೋಟಿ ಬಿಡುಗಡೆ ಮಾಡಲಾಗಿದ್ದು, ಇದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ ಎಂದು ಪರಮೇಶ್ವರ್ ಹೇಳಿದರು.
ನಾನೇ ಖುದ್ದಾಗಿ ಮಂಡ್ಯ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಮಂಡ್ಯಕ್ಕೆ ರು.17,50 ಕೋಟಿ ಸರ್ಕಾರ ಬಿಡುಗಡೆ ಮಾಡಿದೆ. ಆದಾಗಿಯೂ ಸರ್ಕಾರ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು. ಸರ್ಕಾರದ ಸಹಾಯ ಸಮಯಕ್ಕೆ ಸರಿಯಾಗಿ ರೈತರಿಗೆ ದೊರೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ಹೊಣೆ: ಕೇಂದ್ರ ಸರ್ಕಾರದ ನೀತಿಯಿಂದಾಗಿಯೇ ಸಕ್ಕರೆ ಮತ್ತು ರೇಷ್ಮೆ ಉದ್ಯಮ ನಷ್ಟದಲ್ಲಿದೆ. ಸಕ್ಕರೆ ಮತ್ತು ರೇಷ್ಮೆ ಆಮದಿಗೆ ಸರ್ಕಾರ ಅನುಮತಿ ನೀಡಿರುವುದರಿಂದ ನಮ್ಮ ಉದ್ಯಮಕ್ಕೆ ತೊಂದರೆಯಾಗಿದೆ. ಆದರೆ, ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಮತ್ತು ಬಿಜೆಪಿಯ 17 ಸಂಸದರು ಇದುವರೆಗೆ ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಚಕಾರ ಎತ್ತಿಲ್ಲ. ಕೇಂದ್ರ ಸರ್ಕಾರ ರಫಿಲಿಪ್ಟೀನ್ಸ್ ನಿಂದ ಸಕ್ಕರೆ ಆಮದು ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿರುವುದೇ ಇದೆಲ್ಲದಕ್ಕೆ ಕಾರಣ ಎಂದರು.
ಉಸ್ತುವಾರಿ ಸಚಿವರಿಗೆ ಸೂಚನೆ
ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡುವಂತೆ ಪಕ್ಷದ ವತಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಅವರು ನೀಡಿದ ವರದಿ ಆಧರಿಸಿ ಪಕ್ಷ ಸರ್ಕಾರಕ್ಕೆ ವರದಿ ನೀಡುತ್ತದೆ ಎಂದು ಹೇಳಿದರು. ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೆ ಭೇಟಿ ನೀಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪಕ್ಷದ ವತಿಯಿಂದ ಸೂಚನೆ ನೀಡುತ್ತೇನೆ. ರೈತರ ಮನೆಗೆ ತೆರಳುವಂತೆ ಹೇಳುತ್ತೇನೆ ಎಂದರು. ಕೃಷಿ ಸಚಿವ ಕೃಷ್ಣಭೈರೇಗೌಡರು ಸಾಕಷ್ಟು ಉತ್ಸಾಹಿಗಳಾಗಿದ್ದು, ಈಗ ವಿಧಾನಸೌಧದಲ್ಲಿದ್ದಾರೆ ಎಂದರು.
Advertisement