ಲೋಕಾಯುಕ್ತ ಲಂಚ ಪ್ರಕರಣ- ವಿಧಾನಸಭೆಯಲ್ಲೂ ಸದ್ದು

ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ವಿಧಾನಸಭೆಯಲ್ಲಿ ಮತ್ತೆ ಸದ್ದು ಮೂಡಿಸಿದ್ದು, ಸರ್ಕಾರ ಮತ್ತು ಲೋಕಾಯುಕ್ತರು ಪರಸ್ಪರ ರಕ್ಷಣೆ ಸೂತ್ರಕ್ಕೆ ...
ಪ್ರತಿಪಕ್ಷನಾಯಕ ಜಗದೀಶ್ ಶೆಟ್ಟರ್
ಪ್ರತಿಪಕ್ಷನಾಯಕ ಜಗದೀಶ್ ಶೆಟ್ಟರ್

ವಿಧಾನಸಭೆ: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ವಿಧಾನಸಭೆಯಲ್ಲಿ ಮತ್ತೆ ಸದ್ದು ಮೂಡಿಸಿದ್ದು, ಸರ್ಕಾರ ಮತ್ತು ಲೋಕಾಯುಕ್ತರು ಪರಸ್ಪರ ರಕ್ಷಣೆ ಸೂತ್ರಕ್ಕೆ ಅಂಟಿಕೊಂಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದೆ. ಪ್ರಶ್ನೋತ್ತರ ಕಲಾಪ ಬಳಿಕ ಸ್ಪೀಕರ್ ಕಾಗೋಡು ತಿಮ್ಮಪ್ಪ ಪರಿಷ್ಕೃತ ರೂಪದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಚರ್ಚೆನಡೆಸುವುದಕ್ಕೆ ಅವಕಾಶ ನೀಡಿದ್ದು. ವೈ. ಬಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರನ್ನು ಬಂಧಿಸದೇ ಸರ್ಕಾರ ರಕ್ಷಣೆ ನೀಡುತ್ತಿದೆ. ಲೋಕಾಯುಕ್ತ ಸಂಸ್ಥೆಯ ಹೆಸರು ಬಳಸಿಕೊಂಡು ಅಧಿಕಾರಿಗಳಿಂದ  ರೂ. 200 ಕೋಟಿ ಅಕ್ರಮ ಹಣ ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಮಾತ್ರವಲ್ಲ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ತನಿಖೆ ಮುಕ್ತಾಯಕ್ಕೆ ಮುನ್ನವೇ ಸಿಎಜಿ ವರದಿ ಆಧರಿಸಿ ಲೋಕಾಯುಕ್ತರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸುವುದರ ಹಿಂದೆ ಸರ್ಕಾರದ ಚಿತಾವಣೆ ಇದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದು, ಚರ್ಚೆಗೆ ಈಗ ರಾಜಕೀಯದ ರಂಗೂ ಮೆತ್ತಿಕೊಂಡಿದೆ. ಲೋಕನ್ಯಾಯ ಇಲ್ಲ: ಲೋಕಾಯುಕ್ತದಲ್ಲಿ ಸಹಜ ನ್ಯಾಯ ಪಾಲನೆಯಾಗುತ್ತಿಲ್ಲ. 2012 ನೇ ಸಾಲಿನ ಸಿಎಜಿ ವರದಿಯಲ್ಲಿ ಉಲ್ಲೇಖವಾದ ವಿಚಾರ ಆಧರಿಸಿ ಖಾಸಗಿ ದೂರಿನ ಮೇರೆಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಲೋಕಾಯುಕ್ತ ಎಫ್ಐಆರ್ ದಾಖಲಿಸಿದೆ. ಸಾರ್ವಜನಿಕ ಲೆಕ್ಕಪತ್ರ ಸಮತಿಯ ತನಿಖೆ ಇನ್ನೂ ಮುಕ್ತಾಯಗೊಂಡಿಲ್ಲ. ಆಗಲೇ ಅವಸರದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದು ಲೋಕಾಯುಕ್ತದ ಅಧಿಕಾರ ದುರ್ಬಳಕೆ ನೀತಿಗೊಂದು ಉದಾಹರಣೆ ಎಂದರು. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್‍ನ ರಮೇಶ್‍ಕುಮಾರ್ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಸದನದ ಸೃಷ್ಟಿ. ಸಿಎಜಿ ವರದಿ ಪರಿಶೀಲನೆ ನಡೆಸುವಂತೆ ಸದನವೇ  ಸೂಚನೆ ನೀಡಿರುತ್ತದೆ. ಹೀಗಾಗಿ ವರದಿ ಬರುವುದಕ್ಕೆ ಮುನ್ನವೇ ಎಫ್ ಐಆರ್ ದಾಖಲಾಗಿದ್ದರೆ, ಸದನದ ಹಕ್ಕುಚ್ಯುತಿಯಾಗುತ್ತದೆ. ಈ ಬಗ್ಗೆ ಸಭಾಧ್ಯಕ್ಷರು ಪರಿಹಾರ ನೀಡಬೇಕು ಎಂದರು.

ಹಕ್ಕುಚ್ಯುತಿ ಆರೋಪ: ಇದಕ್ಕೆ ಸ್ಪಷ್ಟನೆ ನೀಡಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರೂ ಆದ ಗೋವಿಂದ ಕಾರಜೋಳ, ಲೋಕಾಯುಕ್ತದವರು ಜೂನ್ 2ರಂದು ಸಿಐಡ್ ಡಿಜಿಪಿಗೆ ಪತ್ರ ಬರೆದು ಇನ್ನು ದಿನಗಳೊಳಗಾಗಿ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡತಕ್ಕದ್ದು ಎಂದಿದ್ದರು. ಸಿಐಡಿ ಡಿಜಿಪಿ 20 ದಿನಗಳ ಕಾಲಾವಕಾಶ ಕೋರಿದ್ದರು.

ಒತ್ತಾಯಪೂರ್ವಕವಾಗಿ  ಅರೆಬೆಂದ ವರದಿ ತರಿಸಿಕೊಂಡು ಪ್ರಕರಣ ಖಲಿಸಿದ್ದಾರೆ. ಇದರಿಂದ ಸದನದ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿದರು. ಆದರೆ, ಗೃಹ ಸಚಿವ ಜಾರ್ಜ್ ಬಿಜೆಪಿ ಸದಸ್ಯರ ಆರೋಪಕ್ಕೆ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ನೀವು ನಮ್ಮ ವಿರುದ್ಧ ಏಕೆ ಆರೋಪ ಮಾಡುತ್ತೀರಿ ಎಂದಾಗ, ಬಿಜೆಪಿಯ ಬಸವರಾಜ್ ಬೊಮ್ಮಾಯಿ, ನಾವು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿಲ್ಲ. ಲೋಕಾಯುಕ್ತದ ಕಾರ್ಯ ನಿರ್ವಹಣೆ ಹೇಗೆ ಸಾಗುತ್ತಿದೆ ಎಂದು ಸದನದ ಮುಂದೆ ಅನಾವರಣ ಮಾಡುತ್ತಿದ್ದೇವೆ. ಆದರೆ ನೀವ್ಯಾಕೆ ಪದೇಪದೇ  ಎದ್ದು ನಿಲ್ಲುತ್ತೀರಿ. ನಿಮ್ಮ ವರ್ತನೆಯಿಂದಲೇ ಈ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವಿದೆ ಎಂಬ ಅನುಮಾನ ಬರುತ್ತಿದೆ ಎಂದು ತಿರುಗೇಟುನೀಡಿದರು.

ಪರಸ್ಪರ ರಕ್ಷಣೆ: ಆರೋಪ ಮುಂದುವರಿಸಿದ ಜಗದೀಶ್ ಶೆಟ್ಟರ್ ಲೋಕಾಯುಕ್ತ ಸೆಕ್ಷನ್ 15 ಮತ್ತು 18ರ ಪ್ರಕಾರ ಸರ್ಕಾರ ಎಸ್‍ಐಟಿ ರಚನೆ ಮಾಡಿದೆ. ಲೋಕಾಯುಕ್ತ ಸಂಸ್ಥೆಯ ಉದ್ಯೋಗಿಗಳ ವಿಚಾರದಲ್ಲಿ ಸಿಬಿಐ ತನಿಖೆಗೆ ಮಾತ್ರ ಈ ಪರಿಚ್ಛೇದ ಅಡ್ಡಿಯಾಗುತ್ತದೆ. ಆದರೆ, ಲೋಕಾಯುಕ್ತರ ಪುತ್ರನ ವಿಚಾರದಲ್ಲಿ ಅಲ್ಲ. ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಸರ್ಕಾರ ಪ್ರಕರಣವನ್ನೂ ಸಿಬಿಐಗೆ ಒಪ್ಪಿಸಿಲ್ಲ. ಅಶ್ವಿನ್ ರಾವ್ ಅವರು ತಮ್ಮ ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಸುಮಾರು ರೂ.200 ಕೋಟಿ ಅಕ್ರಮ ಹಣವನ್ನು ಸಂಗ್ರಹಿಸಿದ್ದಾರೆ. ಸರ್ಕಾರ ಮತ್ತು ಲೋಕಾಯುಕ್ತ ಸಂಸ್ಥೆ ಪರಸ್ಪರ ರಕ್ಷಣೆಯಲ್ಲಿ ತೊಡಗಿದ್ದು, ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಆಡಳಿತ ಪಕ್ಷದವರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.
ಲೋಕಾಯುಕ್ತರೇ  ಪ್ಲೀಸ್ ಗೋ ಔಟ್
ಲೋಕಾಯುಕ್ತರೇ ನೀವು ಈ ಸದನದ ಭಾವನೆ ಅರ್ಥ ಮಾಡಿಕೊಳ್ಳಿ. ಪ್ಲೀಜ್ ಗೋ ಔಟ್ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣದ ಚರ್ಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಾಯುಕ್ತದಲ್ಲಿ ಸಂವಿಧಾನೇತರ ವ್ಯಕ್ತಿಗಳು ಅಧಿಕಾರ ಚಲಾಯಿಸುತ್ತಿದ್ದಾರೆ. ಅಶ್ವಿನ್ ರಾವ್, ಭಾಸ್ಕರ್, ಕೃಷ್ಣರಾವ್ ಎಂಬುವರು ಕೂಟ ರಚಿಸಿಕೊಂಡು ಕಾಯುಕ್ತ ಸಂಸ್ಥೆ ಮತ್ತು ಕ್ರೆಸೆಂಟ್ ರಸ್ತೆಯ ರುವ ಲೋಕಾಯುಕ್ತರ ಮನೆಯಲ್ಲೇ ಅಕ್ರಮ ನಡೆಸುತ್ತಿದ್ದಾರೆ.ಇಷ್ಟೊಂದು ಗಂಭೀರ ಆರೋಪ ಇರುವಾಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಅಧಿಕಾರದಲ್ಲಿ ಮುಂದುವರಿಯಲು ಬಿಟ್ಟರೇ ಗತಿಯೇನು ಎಂದು ಕಳವಳ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com