
ವಿಧಾನಸಭೆ: ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಭೂಸ್ವಾಧೀನವನ್ನು ಯುಪಿಎ ಸರ್ಕಾರ ಜಾರಿಗೊಳಿಸಿರುವ 2013ರ ಭೂಸ್ವಾಧೀನ ಕಾಯ್ದೆಯಂತೆಯೇ ಕ್ರಮ ಕೈಗೊಳ್ಳಲಾಗುತ್ತದೆ.
2014ರಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಜಲಸಂಪನ್ಮೂಲ ಇಲಾಖೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವರು, ನೀರಾವರಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಮುಖವಾಗಿದ್ದು, ನಮ್ಮ ಸರ್ಕಾರ 2013ರ ಭೂಸ್ವಾಧೀನ ಕಾಯ್ದೆಯನ್ನು ಸಂಪೂರ್ಣವನ್ನು ಒಪ್ಪಿಕೊಂಡಿದೆ. ಅದನ್ನೇ ಅನುಷ್ಠಾನಗೊಳಿಸಲು ನಿಯಮಗಳನ್ನು ರೂಪಿಸುತ್ತಿದೆ. ಇನ್ನೊಂದು ತಿಂಗಳಲ್ಲಿ ಅದು ಸಿದ್ಧಗೊಳ್ಳಲಿದೆ. ಅದರಂತೆಯೇ ನೀರಾವರಿ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಈಗಿನ ಕೇಂದ್ರದ ಅಧಿಸೂಚನೆಯನ್ನು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎತ್ತಿನಹೊಳೆ ಯೋಜನೆಯನ್ನು ಈ ಕಾಯ್ದೆ ಮೂಲಕ ಭೂಮಿ ಸ್ವಾಧೀನಕ್ಕೆ ಸಮಸ್ಯೆ ಉಂಟಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದ ಸಲಹೆಯಂತೆ ಭೂಮಿಯನ್ನು ಖರೀದಿಸಿ ಯೋಜನೆ ಪೂರ್ಣಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾಲೂರು ಶಾಸಕ ಮಂಜುನಾಥಗೌಡ ಮಾತನಾಡಿ, ಯೋಜನೆಗೆ ರೈತ ಭೂಮಿ ಕೊಡದಿದ್ದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವರು ಹಾರಿಕೆಯ ಉತ್ತರ ನೀಡಿದರು. ಆಗ ಆಕ್ರೋಶ ವ್ಯಕ್ತಪಡಿಸಿದ ಮಂಜುನಾಥ ಗೌಡ, `ನೀವು ಬರೀ ಕಾಗದದಲ್ಲಿ ಯೋಜನೆಯನ್ನು ಹೇಳುತ್ತಿದ್ದೀರಿ. ಎತ್ತಿನಹೊಳೆಗೆ ಸಾವಿರಾರು ಕೋಟಿ ಎಂದು ಹೇಳಿ ಗಂಟೆಗಟ್ಟಲೆ ಭಾಷಣ ಮಾಡುತ್ತೀರಿ. ವಾಸ್ತವದಲ್ಲಿ ಏನೂ ನಡೆಯುತ್ತಿಲ್ಲ. ನೀವು ಕೇವಲ ಪ್ರಚಾರಕ್ಕೆ ಇದನ್ನು ಮಾಡುತ್ತಿದ್ದೀರಿ. ನಮ್ಮ ಸಮಸ್ಯೆಯನ್ನು ಈಡೇರಿರುವ ಗುರಿ, ಉದ್ದೇಶ ಎರಡೂ ನಿಮಗಿಲ್ಲ' ಎಂದರು.
ಯೋಜನೆಗೆ ತನ್ನದೇ ಕಾಲಬೇಕಾಗುತ್ತದೆ. ಇದೆಲ್ಲ ಪ್ರಕ್ರಿಯೆಗಳು ನಡೆಯಲೇಬೇಕು. ಗೊತ್ತಾಗಲ್ಲ, ಬಿಡ್ರೀ. ಕೂಡ್ರೀ ಎಂದು ಸಚಿವರು ನುಡಿದರು. ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆಗ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷರು ಯಾರು ಮಾತನಾಡದಂತೆ ತಾಕೀತು ಮಾಡಿದರು.
ಮೇಕೆದಾಟು ನಂತರ ಸ್ಪಷ್ಟ ಚಿತ್ರಣ: ರಾಜ್ಯದಲ್ಲಿ 1113 ಕೆರೆಗಳನ್ನು ತುಂಬುವ ಯೋಜನೆಯಿದ್ದು, ಇದಕ್ಕಾಗಿ ರು.4277 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ರು.1037 ಕೋಟಿ ವೆಚ್ಚ ಮಾಡಲಾಗಿದೆ ಎಂದರು. ಮೇಕೆದಾಟು ಯೋಜನೆಯಲ್ಲಿ ಡಿಪಿಆರ್ ಸಿದ್ಧಗೊಳ್ಳಲು ಇನ್ನೂ ಆರು ತಿಂಗಳ ಅಗತ್ಯವಿದ್ದು, ನಂತರವಷ್ಟೇ ನೀರು ಲಭ್ಯತೆ ಹಾಗೂ ಇತರೆ ಅನುಕೂಲಗಳ ಪಟ್ಟಿ ಲಭ್ಯವಾಗಲಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಜಾಗತಿಕ ಟೆಂಡರ್‍ಗೆ ಯಾರೂ ಬಾರದಿದ್ದು, ಮತ್ತೆ ಟೆಂಡರ್ ಕರೆಯಲಾಗಿದೆ ಎಂದರು.
Advertisement