ಅರ್ಧಂಬರ್ಧ ಅಧಿವೇಶನ

ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ದಾಖಲಾಗದೇ ಇರಬಹುದು. ಆದರೆ, ಅಧಿವೇಶನ ಮಾತ್ರ ನಿರೀಕ್ಷಿತ ಮಟ್ಟ ಮುಟ್ಟದೇ ಕೊಚ್ಚಿಹೋಯಿತು...
ವಿಧಾನಸಭಾ ಅಧಿವೇಶನ
ವಿಧಾನಸಭಾ ಅಧಿವೇಶನ
Updated on

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ದಾಖಲಾಗದೇ ಇರಬಹುದು. ಆದರೆ, ಅಧಿವೇಶನ ಮಾತ್ರ ನಿರೀಕ್ಷಿತ ಮಟ್ಟ ಮುಟ್ಟದೇ ಕೊಚ್ಚಿಹೋಯಿತು.

ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ನಡೆದ ನಾಲ್ಕುವಾರದ ಅಧಿವೇಶನದಲ್ಲಿ ಲೆಕ್ಕಕ್ಕೆ 5 ಇಲಾಖೆಗಳ ಮೇಲೆ ಚರ್ಚೆ ನಡೆಯಿತೇ ವಿನಃ ಪ್ರಮುಖ ಇಲಾಖೆಗಳ ಚರ್ಚೆ ನಡೆಯಲೇ ಇಲ್ಲ. ಶುಕ್ರವಾರ ಗದ್ದಲದ ನಡುವೆ ಬಜೆಟ್ ಗೆ ಒಪ್ಪಿಗೆ ಪಡೆದುಕೊಳ್ಳುವುದರೊಂದಿಗೆ ಮಳೆಗಾಲದ ಅಧಿವೇಶನದ ಒಂದು ಹಂತ ಮುಕ್ತಾಯ ಕಂಡಿತು.

ಜು.30 ಮತ್ತು 31ರಂದು ಅಧಿವೇಶನ ಮುಂದುವರಿಯುವುದಾದರೂ ಬಜೆಟ್ ತರುವಾಯದ ಆ ದಿನಗಳಲ್ಲಿ ಇಲಾಖೆ ಚರ್ಚೆಗೆ ಅವಕಾಶವಿಲ್ಲ. ಸದ್ಯ ಲೋಕೋಪಯೋಗಿ ಇಲಾಖೆ, ಕೃಷಿ ಮತ್ತು ತೋಟಗಾರಿಕೆ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೇಲೆ ಚರ್ಚೆ ನಡೆಯಿತಾದರೂ ಇಲಾಖಾ ಹೊರತಾದ ವಿಷಯಗಳು ಈ ಇಲಾಖೆಗಳ ಚರ್ಚೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿಲ್ಲ. ಜೊತೆಗೆ ಸಮಾಜಕಲ್ಯಾಣ ಮತ್ತು ಗೃಹ ಇಲಾಖೆಯದ್ದು  ಆನುಷಂಗಿಕವಾಗಿ ಚರ್ಚೆ ನಡೆದಿದೆ. ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಇಲಾಖೆ ಸೇರಿದಂತೆ ಹಲವಾರು ಪ್ರಮುಖ ಇಲಾಖೆಗಳ ಕುರಿತು ಚರ್ಚೆಯೇ ನಡೆಯಲಿಲ್ಲ.

ಇಲಾಖಾ ಚರ್ಚೆಯ ಮಹತ್ವ?:
ಇಲಾಖೆ ಮೇಲಿನ ಚರ್ಚೆ ನಡೆದು ಬಜೆಟ್ ಅನುಮೋದನೆಗೆ ಮುನ್ನ ಸರ್ಕಾರ ಸದಸ್ಯರ ಅಹವಾಲುಗಳನ್ನು ಆಲಿಸಿ, ಸಲಹೆಗಳನ್ನು ಸ್ವೀಕರಿಸಬೇಕೆಂಬುದು ಸದಸ್ಯರ ಆಶಯವಾಗಿತ್ತು. ಆದರೆ, ಇದಕ್ಕೆ ಪೂರ್ಣ ಪ್ರಮಾಣವಿರಲಿ, ಭಾಗಶಃ ಅವಕಾಶವೂ ಸಿಗಲಿಲ್ಲ. ಇಲಾಖಾವಾರು ಚರ್ಚೆ ನಡೆಯಬೇಕೆಂಬುದು ಸ್ಪೀಕರ್ ಕಾಗೋಡು ತಿಮ್ಮಪ್ಪನವರ ಮಹತ್ವದ ಆಶಯ. ಅವರ ಬೇಡಿಕೆಯಂತೇ ಸರ್ಕಾರ ಸಹ ಆಸಕ್ತಿ ತೋರಿಸಿತಾದರೂ ಬೇರೆ ಬೇರೆ ಕಾರಣಗಳಿಂದ  ಆಶಯ ಈಡೇರಲಿಲ್ಲ. ಇಲಾಖಾವಾರು ಚರ್ಚೆ ಎಂದರೆ ಸುಮ್ಮನೆ ಚರ್ಚೆಯಲ್ಲ. ಕಳೆದ ವರ್ಷದ ಬಜೆಟ್‍ನ ಸ್ವರೂಪ ನಿರ್ಣಯವಾಗಬೇಕಾಗಿತ್ತು. ಇಲ್ಲಿ ಸರ್ಕಾರ ಮತ್ತು ಆಡಳಿತ ವೈಖರಿಯನ್ನು ಪ್ರದರ್ಶಿಸಲು ಪ್ರತಿಪಕ್ಷಗಳಿಗೆ ಅವಕಾಶ ಸಿಕ್ಕರೆ, ತನ್ನ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಯಲ್ಲಿ ಸಾಗಲು ಸರ್ಕಾರಕ್ಕೂ ಅವಕಾಶವಾ ಗುತ್ತಿತ್ತು.

ಅಷ್ಟೇ ಅಲ್ಲದೇ ಕಳೆದ ಬಜೆಟ್‍ನಲ್ಲಿ ನಿಗದಿ ಯಾದ ಹಣ, ಖರ್ಚಾಗದ ಹಣ, ಲೋಪದೋಷಗಳು, ಅಧಿಕಾರಿಗಳ ಕಾರ್ಯ ವೈಖರಿ, ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಲು ಸದಸ್ಯರಿಗೆ ಅವಕಾಶವಿತ್ತು. ಜೊತೆಗೆ ತಮ್ಮ ಆಶಯಗಳನ್ನು ಬಿತ್ತಲು ಒಂದೊಳ್ಳೆ ಅವಕಾಶ. ಆದರೆ, ಈ ಬಾರಿ ಅದಾಗಲೇ ಇಲ್ಲ. ಈ ಕಲಾಪದಲ್ಲಿ ಇಲಾಖಾವಾರು ಚರ್ಚೆಗಿಂತ ಹೊರಗಿನ ವಿಚಾರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದ್ದು  ವಿಶೇಷ. ಪ್ರಮುಖವಾಗಿ ಲೋಕಾಯುಕ್ತ ಭ್ರಷ್ಟಾ ಚಾರ, ರೈತರ ಆತ್ಮಹತ್ಯೆ, ಅವಿಶ್ವಾಸ ನಿರ್ಣಯ  ಇತ್ಯಾದಿ. ಜುಲೈ 30 ಮತ್ತು 31ರಂದು ಅಧಿವೇಶನ ಮುಂದುವರಿಯಲಿದ್ದು ಲೋಕಾಯುಕ್ತ ತಿದ್ದುಪಡಿ ವಿಧೇಯಕ ಮತ್ತು ಇನ್ನಿತರ ತಿದ್ದುಪಡಿ ವಿಧೇಯಕ ಗಳಿಗೆ ಆ ಎರಡು ದಿನ ಮೀಸಲಾಗುತ್ತದೆ. ಹೀಗಾಗಿ, ಬಹುಪಾಲು ಇಲಾಖೆ ಬೇಡಿಕೆಗಳ ಚರ್ಚೆ ನಡೆಯದೇ ಕಲಾಪ ಅಂತ್ಯಗೊಂಡಂತಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com