ರೈತರ ಆತ್ಮಹತ್ಯೆ ತಡೆಗೆ ಮಠಾಧೀಶರೊಂದಿಗೆ ಬಿಜೆಪಿ ವಿಶೇಷ ಅಭಿಯಾನ: ಜೋಶಿ

ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ನಾಡಿನ ಮಠಾಧೀಶರೊಂದಿಗೆ ಬಿಜೆಪಿ ರಾಜಕೀಯೇತರ ವಿಶೇಷ ಅಭಿಯಾನ ...
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ

ಗದಗ: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ನಾಡಿನ ಮಠಾಧೀಶರೊಂದಿಗೆ ಬಿಜೆಪಿ ರಾಜಕೀಯೇತರ ವಿಶೇಷ ಅಭಿಯಾನ ನಡೆಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲೆಯ ವಿವಿಧ ಗ್ರಾಮಗಳ ರೈತರ ಮನೆಗಳಿಗೆ ಭಾನುವಾರ ಭೇಟಿ ನೀಡಿದ ಆನಂತರ ಗದಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನಮ್ಮ ರೈತರು ಮತ್ತು ಸಾರ್ವಜನಿಕರು ಮಠಾಧೀಶರ ಮಾತಿಗೆ ಗೌರವ ನೀಡಿ, ಅದನ್ನು ಪಾಲಿಸುತ್ತಾರೆ. ಹೀಗಾಗಿ ನಾಡಿನ ಎಲ್ಲ ಮಠಾಧೀಶರ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಅಭಿಯಾನ ನಡೆಯಲಿದೆ. ಬಿಜೆಪಿ ದೂರದಿಂದಲೇ ರೈತರು ಮತ್ತು ಮಠಾಧೀಶರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ವಿವರಿಸಿದರು.ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜ್ಯದಲ್ಲಿ ರೈತರು ನೂರಾರು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾಣಲಿಲ್ಲವೇ? ಅಥವಾ ಸಿಎಂ ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಹೆದರುತ್ತಾರಾ? ಕರ್ನಾಟಕದ ರೈತರು ಮತ್ತು ಆಂಧ್ರಪ್ರದೇಶದ ರೈತರು ಬೇರೆ ಬೇರಯೇ? ಈ ರೀತಿ ಜನರಿಗೆ ಮೋಸ ಮಾಡಿದರೆ ರಾಜ್ಯದ ಜನತೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುತ್ತಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿ ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದಾದರೆ ಆ ಕುರಿತು ಶ್ವೇತಪತ್ರ ಹೊರಡಿಸಲಿ. ಕೇಂದ್ರ ಸರ್ಕಾರ ಎಷ್ಟು ಮತ್ತು ಯಾವ ವಿಭಾಗದಲ್ಲಿ ನೀಡಿದ ಅನುದಾನದ ಬಗ್ಗೆ ಅಗತ್ಯ ದಾಖಲೆಗಳನ್ನು ಮಾಧ್ಯಮಗಳ ಮೂಲಕ ನೀಡಿದ್ದೇನೆ. ಆದರೂ ಮುಖ್ಯಮಂತ್ರಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಕೃಷಿ ನೀತಿ: ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಕೃಷಿ ನೀತಿ ಜಾರಿಗೆ ತರಲಿದೆ. ವಿಶೇಷ ಹವಾಮಾನ ಆಧಾರಿತ ವಿಮೆ ಜಾರಿಗೆ ತರಲಿದೆ. ಬೆಲೆ ಕುಸಿತ ಹಾಗೂ ಮಳೆ ಕೊರತೆ ಎದುರಾದ ವೇಳೆಯಲ್ಲಿ ರೈತರಿಗೆ ಉಂಟಾಗುವ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಲಿದೆ. ರೈತರ ಸಮಗ್ರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಕೇಂದ್ರ ಸರ್ಕಾರ ವಿಶೇಷ ಗಮನ ನೀಡಿದೆ. ಚಳಿಗಾಲದ ಅಧಿವೇಶದನ ವೇಳೆಯಲ್ಲಿ ನೀತಿ ಚರ್ಚೆಗೆ ಬರಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com