
ವಿಧಾನಸೌಧ: ರಾಜ್ಯ ಸರ್ಕಾರದ ಸಾಲ ನೀತಿ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ರಮೇಶ್‍ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡುವ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಅವರು, ರೈತರಿಗೆ ಪರಿಹಾರ ನೀಡುವುದರಿಂದ, ಬಡ್ಡಿ ಮನ್ನಾ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸರ್ಕಾರ ಸೂಕ್ತ ಸಾಲ ನೀತಿಯನ್ನು ಇನ್ನೂ ನಿಗದಿ ಮಾಡದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ ಎಂದರು.
ಶೇ. 3ರ ಬಡ್ಡಿ, ಶೇ.6ರ ಬಡ್ಡಿ, ಶೂನ್ಯ ಬಡ್ಡಿ ಎಂಬುದು ಸರ್ಕಾರದ ಪ್ರಚಾರ ತಂತ್ರ. ಬುಕ್ ಅಡ್ಜೆಸ್ಟ್‍ಮೆಂಟ್. ಎಲ್ಲ ರೈತರಿಗೆ ಸೂಕ್ತ ಸಾಲ ಸಿಗುತ್ತದೆ ಎಂದು ನೀವು ಹೇಳಿದರೆ ಅದು ಸುಳ್ಳು ಅಥವಾ ಆತ್ಮವಂಚನೆ, ಇಲ್ಲವೇ ದುರುದ್ದೇಶಪೂರಿತ ಹೇಳಿಕೆ ಎಂದು ನಾನೇ ಹೇಳುತ್ತೇನೆ. ಶೇ.5ರಷ್ಟು ಮಂದಿಗೂ ನಿಮ್ಮ ಸಾಲ ಸಿಗುವುದಿಲ್ಲ. ಸಹಕಾರ ಬ್ಯಾಂಕ್‍ಗಳಿಂದ ಸಾಲ ಸಿಗದ ಕಾರಣಕ್ಕೆ ರೈತ ವಾಣಿಜ್ಯ ಬ್ಯಾಂಕ್‍ನಿಂದ ಸಾಲ ಪಡೆಯಬೇಕಾಗಿದೆ ಎಂದರು.
ನೀವು ಇಲ್ಲಿ ಕೇವಲ ಕಬ್ಬು ಬೆಳೆಗಾರರ ಬಗ್ಗೆ ಮಾತ್ರ ಮಾತನಾಡಬೇಡಿ. ದ್ರಾಕ್ಷಿ, ದಾಳಿಂಬೆ ಬೆಳೆಗಾರರ ಸಮಸ್ಯೆ ಬಗ್ಗೆಯೂ ಚರ್ಚಿಸಿ. ಆದರೆ, ನಿಮ್ಮ ನಿಲುವಳಿ ಸೂಚನೆ ಪತ್ರದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಭಾಗದ ಪ್ರಸ್ತಾಪವಿಲ್ಲ. ನಮ್ಮ ಬಗ್ಗೆ ತುಸು ದಯೆ ತೋರಿ ಎಂದು ಆಗ್ರಹಿಸಿದರು. ಹೌದು. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಅವರಿಗೆ ಪ್ರಾಣವಾದರೂ ಇದೆ. ಆದರೆ, ನಮ್ಮ ಭಾಗದ ತೋಟಗಾರಿಕಾ ಬೆಳೆಗಾರರಿಗೆ ಪ್ರಾಣವೇ ಇಲ್ಲವಾಗಿದೆ. ನಾವು ಸತ್ತು ಹೋಗಿದ್ದೇವೆ. ನಮ್ಮ ಶವ ಸಂಸ್ಕಾರಕ್ಕಾದರೂ ವ್ಯವಸ್ಥೆ ಮಾಡಿ ಎಂದರು.
Advertisement