ಸಿದ್ದರಾಮಯ್ಯ ಬಜೆಟ್ ನೋಡೋಕೆ ತಳುಕು ಬಳುಕು.. ಒಳಗೆಲ್ಲಾ ಹುಳುಕು

ಆಯವ್ಯಯ ಬಹಳ ತಳು ಬಳಕಾಗಿ ಕಾಣುತ್ತದೆ, ಆದರೆ ಒಳಗೆಲ್ಲಾ ಬರೀ ಹುಳುಕೇ!ಹೀಗೆಂದು ಒಂದು ಸಾಲಿನ ಷರಾ ಬರೆದಿದ್ದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ...
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ
Updated on: 

ವಿಧಾನಪರಿಷತ್: ಆಯವ್ಯಯ ಬಹಳ ತಳು ಬಳಕಾಗಿ ಕಾಣುತ್ತದೆ, ಆದರೆ ಒಳಗೆಲ್ಲಾ ಬರೀ ಹುಳುಕೇ!
ಹೀಗೆಂದು ಒಂದು ಸಾಲಿನ ಷರಾ ಬರೆದಿದ್ದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ. ಆಯ ವ್ಯಯ ಮೇಲಿನ ಚರ್ಚೆಯಲ್ಲಿ ಮಾತನಾಡಿದಅವರು, ಸರ್ಕಾರ ನೀಡಿದ ಆಯವ್ಯಯದ ಮೇಲಿನ ಅಂದಾಜುಪಟ್ಟಿ ಹೊತ್ತಿಗೆಯಲ್ಲಿನ ಅಂಶಗಳನ್ನೇ ಪ್ರಸ್ತಾಪಿಸುತ್ತಾರೆ. ಸರ್ಕಾರಕ್ಕೆ ಮುಜುಗರ ತಂದರು.
ಈಶ್ವರಪ್ಪ ಮಾತಿನ ಓಘ ಹೀಗಿತ್ತು...
ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್‍ನವರ ಕೈಯಲ್ಲಿ ಸಿಲುಕಿ ಹಿಚುಕಿ ಹಿಚುಕು ಮುದ್ದೆಯಂತಾಗಿದೆ. ಬಜೆಟ್ ಮಂಡನೆಯಾದಾಗ ಹಿಂದುಳಿದವರು- ದಲಿತರಿಗೆ ಅನುಕೂಲವಾಯಿತು ಎಂದೇ ಬಿಂಬಿಸಲಾಯಿತು. ಆದರೆ, ಈಗ ಸತ್ಯ ಹೊರಬರುತ್ತಿದೆ. ದಲಿತರ ಓಟಿಗಾಗಿ ಇವರು ಮಾಡಿದ್ದು ನಾಟಕ ಎಂಬುದು ಅರ್ಥವಾಗುತ್ತಿದೆ. ದಲಿತರ ಉದ್ಧಾರ  ಮಾಡಿ ಋಣ ತೀರಿಸುವ ಬದಲುಅವರನ್ನು ವಂಚಿಸುತ್ತಿದ್ದಾರೆ. ದಲಿತರಿಗೆ ಏಕೆ ದ್ರೋಹ ಬಗೆಯುತ್ತೀರಾ ಎಂದು ಪ್ರಶ್ನಿಸಿದರು. ಕಳೆದ ಬಾರಿ ಬಜೆಟ್‍ನಲ್ಲಿ ದಲಿತರು, ಹಿಂದುಳಿದವರಿಗೆ 15,834 ಕೋಟಿ ರುಪಾಯಿ ಇಡಲಾಗಿತ್ತು. ಇದರಲ್ಲಿ ಎಸ್ಸಿ ಸಮುದಾಯಕ್ಕೆ ಇಟ್ಟಿದ್ದು 11,519 ಕೋಟಿ. ಇಷ್ಟು ಹಣ ಇಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಪೂರ್ತಿ ಹಣ ಮಾತ್ರ ಬಿಡುಗಡೆ ಮಾಡಲೇ ಇಲ್ಲ. ಸಿಎಂ ಸುತ್ತ ಸುತ್ತುವ ಮಹದೇವ ಪ್ರಸಾದ್ ಅವರು ಈ ಸಂಗತಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕು ಎಂದು ಕಿಚಾಯಿಸಿದ ಈಶ್ವರಪ್ಪ, 11519 ಕೋಟಿ ಎದುರಿಗೆ 5744 ಕೋಟಿ ಬಿಡುಗಡೆಯಾಯಿತು.
ಅದರಲ್ಲೂ 4973 ಕೋಟಿ ಮಾತ್ರ ಖರ್ಚಾಯಿತು ಎಂದು ಎಳೆಎಳೆಯಾಗಿ ವಿವರಿಸಿದರು.100 ಹೋಬಳಿ ಕೇಂದ್ರದಲ್ಲಿ ವಸತಿ ಶಾಲೆ ತೆರೆಯುತ್ತೀವೆಂದಿರಿ, ಒಂದೇ ಒಂದು ಆರಂಭವಾಗಿಲ್ಲ. ಲ್ಯಾಪ್‍ಟಾಪ್ ಕೊಡುವುದಾಗಿ ಹೇಳಿದ್ದಿರಿ, ಎಲ್ಲಿದೆ ಲ್ಯಾಪ್‍ಟಾಪ್ ತೋರಿಸಿ ಎಂದು ಕಟುಕಿದ ಅವರು, ದಲಿತರ ನೇರ ವಿರೋಧಿತನ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನವರ ಹೆಸರಿನಲ್ಲಿ ಎರಡು ಪ್ರತ್ಯೇಕ ಪ್ರಾಧಿಕಾರ ಮಾಡುವ ಬದಲು ಒಂದೇ ಪ್ರಾಧಿಕಾರ ರಚಿಸಿ ರು 50 ಕೋಟಿ ಹಣ ಇಟ್ಟು ಹೊಸ ಸಂದೇಶ ಕೊಡುವಂತಾಗಲಿ ಎಂದು ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ನೀರಾವರಿ ಸಚಿವರಂತೂ ಚೆನ್ನಾಗಿ ಹರಿಕಥೆ ಮಾಡುತ್ತಾರೆ. ನೀರಾವರಿಗೆ ಸೂಕ್ತ ಒತ್ತು ಕೊಡುತ್ತಿಲ್ಲ ಎಂದು ವ್ಯಂಗ್ಯವಾಡಿದ ಈಶ್ವರಪ್ಪ, ಹಿಂದಿನ ಬಜೆಟ್ ನ ಅನೇಕ ಕಾರ್ಯಕ್ರಮಗಳಿಗೆ ಪ್ರಸ್ತಾವನೆ ಕಳಿಸಲಾಗಿದೆ ಎಂಬ ಉತ್ತರವನ್ನು ಸರ್ಕಾರ ನೀಡಿದೆ. ಪ್ರಸ್ತಾವನೆ ಕಳಿಸಿದರೆ ಆಯಿತೆ, ಯೋಜನೆ ಅನುಷ್ಠಾನ
ಆಗುವುದು ಯಾವಾಗ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈಶ್ವರಪ್ಪನವರ ಅರ್ಧ ಭಾಷಣ ಮುಗಿದ ನಂತರ
ಸದನಕ್ಕೆ ಆಗಮಿಸಿ ಸಿಎಂ ಈಶ್ವರಪ್ಪನವರೊಂದಿಗೆ ಆಗಾಗೆ  ಮಾತಿನ ಜುಗಲ್‍ಬಂಧಿಯಲ್ಲಿ ಪಾಲ್ಗೊಂಡರು. ಬಿಜೆಪಿಯ ನಾರಾಯಣಸ್ವಾಮಿ
ಮಾತನಾಡಿ, ಸಿದ್ದರಾಮಯ್ಯ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ರು. 22,293ಕೋಟಿಗಳ ಸಾಲ ಮಾಡಲಾಗಿದ್ದು, ಇದು ಅನಗತ್ಯ ಹೊರೆಯಾಗಿದೆ
ಎಂದರು. ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಸರ್ಕಾರದ ಸಾಲ ರು. 45,000ಕೋಟಿ ಇತ್ತು. ಆದರೆ ಈಗ  ರು. 1,80,815ಕೋಟಿಗಳಿವೆ. 10 ಬಾರಿ ಬಜೆಟ್ ಮಂಡಿಸಿರುವ ಖ್ಯಾತಿಗೆ ಪಾತ್ರರಾದ ಸಿದ್ದರಾಮಯ್ಯ ಅವರು ಬುದ್ಧಿವಂತಿಕೆಯಿಂದ ಆರ್ಥಿಕ ಮುನ್ನಡೆ ಸಾಧಿಸುತ್ತಾರೆ ಎಂದರೆ ಸಾಲದ ಹೊರೆಯನ್ನು ಜನರಮೇಲೆ ಹಾಕಿದ್ದಾರೆ ಎಂದು ಟೀಕಿಸಿದರು. ನೀರಿನ ಸದ್ಬಳಕೆ ಬಗ್ಗೆ ಮಾತನಾಡದ ಸಿದ್ದರಾಮಯ್ಯ ಅವರದು ಒಂದು ರೀತಿಯ ಗಾಳಿ ಗೋಪುರದಂತ ಬಜೆಟ್ ಎಂದು ಜರಿದರು. ಇದಕ್ಕೂ ಮುನ್ನ ಕಾಂಗ್ರೆಸ್‍ನ ವೀರಣ್ಣ ಮತ್ತಿಕಟ್ಟಿ  ಮಾತನಾಡಿ, ರಾಜ್ಯ ಬಜೆಟ್ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಬಜೆಟ್ ಆಗಿದ್ದು, ಇದನ್ನು ಅಧಿ ಕಾರಿಗಳು ಇಚ್ಛಾಶಕ್ತಿಯಿಂದ ಜಾರಿಗೊಳಿಸಿದರೆರಾಜ್ಯ ಶ್ರೀಮಂತವಾಗುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com