ವಿಶೇಷ ಅಧಿವೇಶನಕ್ಕೆ ಬಿಜೆಪಿ ಆಗ್ರಹ

ಕೆರೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ ಬುಲ್ಡೋಜ್ ನೀತಿ ಅನುಸರಿಸುತ್ತಿದ್ದು, ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ಇಟ್ಟುಕೊಂಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ...
ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್
ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್

ಬೆಂಗಳೂರು: ಕೆರೆ ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ ಬುಲ್ಡೋಜ್ ನೀತಿ ಅನುಸರಿಸುತ್ತಿದ್ದು, ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ಇಟ್ಟುಕೊಂಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿದ ಅವರು, `ಬಿಬಿಎಂಪಿ ವಿಭಜನೆ ವಿಚಾರದಲ್ಲಿ ತುರ್ತು ಅಧಿವೇಶನ ಕರೆಯುವ ಸರ್ಕಾರ ಈ ವಿಚಾರದಲ್ಲಿ ಮಾತ್ರ ಮೌನವಹಿಸಿದೆ. ಕೆರೆ ಒತ್ತುವರಿ ತೆರವು ಬಗ್ಗೆ ಚರ್ಚೆ ನಡೆಸಲು ತುರ್ತು ಅಧಿವೇಶನ ಕರೆಯಬೇಕು. ಸಿಎಂ ಸಿದ್ದರಾಮಯ್ಯ ಅವರ ಸ್ವಂತ ಮನೆಯನ್ನು ಯಾರಾದರೂ ಈ ರೀತಿ ಕೆಡವಿದರೆ ಸುಮ್ಮನೆ ಇರುತ್ತಿದ್ದರೆ' ಎಂದು ಪ್ರಶ್ನಿಸಿದರು.

ಬೆಂಗಳೂರು ನಗರದಲ್ಲಿ ಬಲಾಢ್ಯ ಭೂಗಳ್ಳರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುವುದಕ್ಕೆ ಬಿಜೆಪಿಯ ಸಹಮತವಿದೆ. ಆದರೆ, ತಮ್ಮದಲ್ಲದ ತಪ್ಪಿಗೆ ಅಮಾಯಕರ ಮನೆಯನ್ನು ಒಡೆದು ಹಾಕಲಾಗುತ್ತಿದೆ. ಅಧಿಕಾರಿಗಳು ಮಾಡಿದ ತಪ್ಪಿಗಾಗಿ ಕೆರೆ ಆವರಣದಲ್ಲಿ ಮನೆ ಕಟ್ಟಿಕೊಂಡವರ ಪರಿಸ್ಥಿತಿ ಈಗ ನೇಪಾಳ ಭೂಕಂಪ ಸಂತ್ರಸ್ತರಿಗಿಂತ ಹೀನಾಯವಾಗಿದೆ.

25ರಿಂದ 30 ವರ್ಷಗಳ ಕಾಲ ಇಲ್ಲಿ ನೆಲೆಸಿದ್ದವರ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬೆಂಗಳೂರು ನಗರದ ಹಲವು ಕರೆಗಳಲ್ಲಿ ಈಗ ಸರ್ಕಾರಿ ಸ್ವತ್ತುಗಳು ನಿರ್ಮಾಣಗೊಂಡಿವೆ. ಧರ್ಮಾಂಬುಧಿ ಕೆರೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣವಿದೆ. ಮಿಲ್ಲರ್ಸ ಟ್ಯಾಂಕ್‍ನಲ್ಲಿ ಪ್ರದೇಶ ಕಾಂಗ್ರೆಸ್‍ನ ಕಚೇರಿಯಿದೆ. ಸಾಣೆಗುರುವನಹಳ್ಳಿ ಕೆರೆಯಲ್ಲಿ
ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಇದೆ. ಪರಿಸ್ಥಿತಿ ಹೀಗಿರುವಾಗ ಯಾರ ಕೈಗೆ ಬೇಡಿ ಹಾಕಬೇಕೆಂಬ ಬಗ್ಗೆ ಸರ್ಕಾರ ಮೊದಲು ಯೋಚನೆ ಮಾಡಬೇಕಿದೆ. ಜೆಸಿಬಿ, ಬುಲ್ಡೋಜರ್ ಇಟ್ಟುಕೊಂಡು ಆಳ್ವಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com