
ಬೆಂಗಳೂರು: `ಅಕ್ರಮ ಲಾಟರಿ ದಂಧೆಯ ಕಿಂಗ್‍ಪಿನ್ ಯಾರೆಂದು ನನಗೆ ಗೊತ್ತಿಲ್ಲ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿರಬಹುದೇನೋ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವ್ಯಂಗ್ಯವಾಡಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಅವರು, `ಅಕ್ರಮ ಲಾಟರಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾ ಎಂಬುವನನ್ನು ಬಂಧಿಸಲಾಗಿದೆ. ಜತೆಗೆ ಪೊಲೀಸ್ ಅಧಿಕಾರಿಯನ್ನೂ ಅಮಾನತುಗೊಳಿಸಿ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಪ್ರಕರಣ ಸಿಐಡಿಗೂವಹಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಕ್ಕೂ, ಅಕ್ರಮ ಲಾಟರಿ ದಂಧೆಯ ಪ್ರಮುಖರಿಗೂ ಕುಮಾರಸ್ವಾಮಿ ಸಂಬಂಧ ಕಲ್ಪಿಸುತ್ತಿರುವುದರಲ್ಲಿ ಅರ್ಥವೇ ಇಲ್ಲ ಎಂದರು.
ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕುಮಾರಸ್ವಾಮಿ ಆಗ್ರಹಿಸುವುದಾದರೆ, `ನಮ್ಮ ಪೊಲೀಸ್ ವ್ಯವಸ್ಥೆ ಮೇಲೆ ಮಾಜಿ ಮುಖ್ಯಮಂತ್ರಿಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಬೇಕಾಗುತ್ತದೆ. ಹಾಗೆಯೇ ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸುವುದಾದರೆ, ನಮ್ಮ ಪೊಲೀಸ್ ವ್ಯವಸ್ಥೆ- ಸಿಐಡಿ ಬಾಗಿಲು ಹಾಕುವುದೊಳಿತಲ್ಲವೇ?' ಎಂದು ಕಟಕಿಯಾಡಿದರು.
ಸದ್ಯ ಪ್ರತ್ಯೇಕವಾಗಿರುವ ಲಾಟರಿ ನಿಯಂತ್ರಣ ದಳವನ್ನು ಪೊಲೀಸ್ ಇಲಾಖೆಯೊಂದಿಗೆ ವಿಲೀನ ಗೊಳಿಸುವ ಆದೇಶ ಹೊರಡಿಸಲಾಗಿದೆ. ಒಬ್ಬರು ಐಜಿ, ಇಬ್ಬರು ಎಸ್ಪಿ, 6 ಡಿವೈಎಸ್ಪಿ, ಜಿಲ್ಲಾಮಟ್ಟದಲ್ಲಿರುವ ಠಾಣೆ, ಇನ್ಸ್ ಪೆಕ್ಟರ್‍ಗಳು ಮಾತೃ ಇಲಾಖೆಯಡಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಎಸ್ಪಿ ಅಡಿಯಲ್ಲಿ ಒಂದು ಜಾಗೃತ ದಳ ರಚಿಸಲಾಗುತ್ತದೆ ಎಂದರು.
ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿಜಯಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ವಿಜಯಕುಮಾರ್ ಅವರ ಬಳಿ ಮಾಹಿತಿ ಇದ್ದರೆ ಅವರು ಅದನ್ನು ತನಿಖಾಧಿಕಾರಿಗಳ ಬಳಿ ನೀಡಲಿ ಎಂದರು. ಗುಪ್ತಚರ ಇಲಾಖೆಗೆ ಪ್ರತ್ಯೇಕ ಕೇಡರ್: ಇನ್ನು ಮುಂದೆ ಗುಪ್ತಚರ ಇಲಾಖೆಗೆ ಪ್ರತ್ಯೇಕ ಕೇಡರ್ ಇರುತ್ತದೆ. ಪೊಲೀಸ್ ಇಲಾಖೆ ಹೊರತುಪಡಿಸಿ ಪ್ರತ್ಯೇಕವಾಗಿಯೇ ನೇಮಕಾತಿ ಮಾಡಲಾಗುತ್ತದೆಎಂದು ಗೃಹ ಸಚಿವರು ತಿಳಿಸಿದರು.
Advertisement