ಅಧಿಕಾರಕ್ಕೆ ಬಾರದಿದ್ದರೂ ಸರ್ಕಾರ ಇಳಿಸುವ ಶಕ್ತಿ ಇದೆ: ಎಚ್.ಡಿ. ಕುಮಾರಸ್ವಾಮಿ

ನಮಗೆ ಅಧಿಕಾರಕ್ಕೆ ಬರುವ ಶಕ್ತಿ ಇಲ್ಲದಿದ್ದರೂ ಅಧಿಕಾರದಿಂದ ಇಳಿಸುವ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ...
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ನಮಗೆ ಅಧಿಕಾರಕ್ಕೆ ಬರುವ ಶಕ್ತಿ ಇಲ್ಲದಿದ್ದರೂ ಅಧಿಕಾರದಿಂದ ಇಳಿಸುವ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದ ಜನ ಜೆಡಿಎಸ್‍ಗೂ ಶಕ್ತಿ ನೀಡಿದ್ದಾರೆ. ಅದರಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲದಿರಬಹುದು. ಆದರೆ, ಅಧಿಕಾರದಿಂದ ಕಾಂಗ್ರೆಸ್ ಸರ್ಕಾರವನ್ನು ಇಳಿಸುವ ಶಕ್ತಿಯಿದೆ. ಅದನ್ನು ಜನತೆ ದಯಪಾಲಿಸಿದ್ದಾರೆ. ಜನತೆ ನೀಡಿದ ಅಧಿಕಾರವನ್ನು ನಾವು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸೂಟ್‍ಕೇಸ್ಗಳನ್ನು ಪಡೆಯಲೂ ಯತ್ನಿಸುವುದಿಲ್ಲ. ಹೀಗಾಗಿ ಅಧಿಕಾರದಿಂದ ಇಳಿಸುವ ಶಕ್ತಿ ನಮಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

ಪ್ರೆಸ್‍ಕ್ಲಬ್ ಮತ್ತು ವರದಿಗಾರರ ಕೂಟ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, `ಪಾರದರ್ಶಕತೆ ಮಾತನಾಡುವ ಸರ್ಕಾರ ಹೆಚ್ಚುತ್ತಿರುವ ಒಂದಂಕಿ ಲಾಟರಿ ಮತ್ತು ಮಟ್ಕಾ ದಂಧೆ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಬೇಕು' ಎಂದು ಆಗ್ರಹಿಸಿದರು.

ಸರ್ಕಾರ ಸದ್ದಿಲ್ಲ ಏಕಾಏಕಿ ಲಾಟರಿ ಜಾಗೃತಿ ದಳ ರದ್ದುಗೊಳಿಸುವ ಮೂಲಕ ಲಾಟರಿ ಮತ್ತು ಮಟ್ಕಾ ಮಾಫಿಯಾ ಪೋಷಿಸಲು ಮುಂದಾಗಿದೆ. ಅಷ್ಟೇ ಅಲ್ಲದೆ, ಲಾಟರಿ ಮತ್ತು ಮಟ್ಕಾ ದಂಧೆ ವಿಚಾರವಾಗಿ ಸಿಐಡಿ ತನಿಖೆ ನಡೆಸುವುದಾಗಿ ಹೇಳಿದೆ. ಹಾಗಿದ್ದರೆ ಜಾಗೃತ ದಳ ರದ್ದುಗೊಳಿಸಿದ್ದು ಏಕೆ? ಅಲ್ಲಿದ್ದ ಹಿರಿಯ ಅಧಿಕಾರಿ ಪದ್ಮನಯನ ಅವರನ್ನು ಎತ್ತಂಗಡಿ ಮಾಡಿದ್ದೇಕೆ? ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಪ್ರಶ್ನಿಸಿದರು.ಸರ್ಕಾರ ಲಾಟರಿ ಮತ್ತು ಮಟ್ಕಾ ದಂಧೆ ಬಗ್ಗೆ ಸಿಬಿಐ ತನಿಖೆ ನಡೆಸಿದರೆ ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ನಾನೇ ಒದಗಿಸುತ್ತೇನೆ ಎಂದರು.

ಜಾಗೃತದಳವನ್ನು ಗೃಹ ಸಚಿವ ಜಾರ್ಜ್, ಕೆಂಪಯ್ಯ ಸಲಹೆಯಂತೆ ರದ್ದುಗೊಳಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರಲ್ಲಿ ಯಾರಿಂದ ಯಾರಿಗೆ ಎಷ್ಟೆಷ್ಟು ಬಟವಾಡೆಯಾಗಿದೆ. ಸಕಾಲಕ್ಕೆ ಚಂದಾ ಸಲ್ಲಿಕೆಯಾಗದೆ ಯಾರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನುವ ಮಾಹಿತಿ ನಮ್ಮ ಬಳಿ ಇದೆ. ಸರ್ಕಾರ ಈ ವಿಚಾರವನ್ನು ಸಿಐಡಿಗೆ ವಹಿಸುವ ಬದಲು ಸಿಬಿಐಗೆ ನೀಡಲಿ ಎಂದರು.

ಬರೀ ಬುಟ್ಟಿ ಅಲ್ಲ, ದಾಖಲೆಗಳ ಹಾವು ತರುತ್ತೇನೆ!

`ಕುಮಾರಸ್ವಾಮಿ ಹಾವುಗಳಿಲ್ಲದ ಬುಟ್ಟಿ ತೋರಿಸಿ' ಮಾತನಾಡುತ್ತಾರೆ ಎಂದು ಲೇವಡಿ ಮಾಡುವವರಿದ್ದಾರೆ. ಆದರೆ, ಸದ್ಯದಲ್ಲೇ `ಸರ್ಕಾರದ ಅಕ್ರಮಗಳ ದಾಖಲೆಗಳೆಂಬ ಹಾವು'ಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಎತ್ತಿನಹೊಳೆ ಯೋಜನಾ ವರದಿ ಸಿದ್ಧಪಡಿಸುವುದಕ್ಕೇ ಸರ್ಕಾರ ರು.1200 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಅಕ್ರಮ ನಡೆದಿದೆ. ಸರ್ಕಾರದ ಕಡೆಯಿಂದ ಚೆಕ್ ಹೋದರೆ, ಆ ಕಡೆಯಿಂದ ನಗದು ಬಂದಿದೆ. ಇದನ್ನು ಸದ್ಯದಲ್ಲೇ ಬಹಿರಂಗ ಮಾಡುತ್ತೇನೆ. ವಿಜ್ಞಾನಿಗಳು ಹೇಳುವ ಪ್ರಕಾರ ಈ ಯೋಜನೆಯಿಂದ 9 ಟಿಎಂಸಿ ನೀರು ಸಿಕ್ಕರೆ ಅದೇ ಹೆಚ್ಚು. ಆದರೆ, ಇದರಲ್ಲಿ 5 ಟಿಎಂಸಿ ಸ್ಥಳೀಯ ಬಳಕೆಗೇ ಆಗುತ್ತದೆ. ಆದರೆ, ಸರ್ಕಾರ 24 ಟಿಎಂಸಿ ಸಿಗುತ್ತದೆ ಎಂದು ರು.1200ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಯಾರಿಗೆ? ಎಷ್ಟು ಹೋಗಿದೆ? ಹೈಕಮಾಂಡ್ ಗೆ ಎಷ್ಟು ಕಾಣಿಕೆ ಸಲ್ಲಿಕೆಯಾಗಿದೆ? ಎನ್ನುವ ವಿವರ ನೀಡುತ್ತೇನೆ ಎಂದು ಹೇಳಿ ಫೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com