ಪಾರದರ್ಶಕ ಆಡಳಿತದ ಸಾಧನೆ:ಸದಾನಂದ ಗೌಡ

ಪಾರದರ್ಶಕ,ಹಗರಣ ಮುಕ್ತ ಆಡಳಿತ ನೀಡಿರುವುದು ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಒಂದು ವರ್ಷದ ಸಾಧನೆ ಎ0ದು ಕೇಂದ್ರದ ಕಾನೂನು ಸಚಿವ ಡಿ.ವಿ,ಸದಾನಂದ ಗೌಡ ಹೇಳಿದರು...
ಸುದ್ದಿಗೋಷ್ಟಿಯಲ್ಲಿ ಅನಂತ್ ಕುಮಾರ್,ಸದಾನಂದ ಗೌಡ
ಸುದ್ದಿಗೋಷ್ಟಿಯಲ್ಲಿ ಅನಂತ್ ಕುಮಾರ್,ಸದಾನಂದ ಗೌಡ

ಬೆಂಗಳೂರು:ಸಬಲೀಕರಣದತ್ತ ಕೊಂಡೊಯ್ದಿರುವುದರ ಜತೆಗೆ ಒಂದು ವರ್ಷದ ಅವಧಿಯಲ್ಲಿ ಪಾರದರ್ಶಕ,ಹಗರಣ ಮುಕ್ತ ಆಡಳಿತ ನೀಡಿರುವುದು ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಒಂದು ವರ್ಷದ ಸಾಧನೆ ಎ0ದು ಕೇಂದ್ರದ ಕಾನೂನು ಸಚಿವ ಡಿ.ವಿ,ಸದಾನಂದ ಗೌಡ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಗಳನ್ನು ಬಿಚ್ಚಿಟ್ಟ ಅವರು,ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸ್ವಚ್ಛ,ಪಾರದರ್ಶಕ ಹಾಗೂ ಹಗರಣ ಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದರು. ಇದನ್ನು ಈ ಒಂದು ವರ್ಷದ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ ಎಂದರು.

ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಸರ್ಕಾರದ ನಿಲುವು ಬದಲಾಗಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲವೂ ತನಿಖೆ ನಡೆಯುತ್ತಿದೆ. ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ಮೂಲಕ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಕಾನೂನು ಸರಳೀಕರಣಗೊಳಿಸುವ ಸಂಬಂಧ ಪ್ರಧಾನಿಯವರು ಹೇಳಿದ್ದರು. ಸುಮಾರು 1741 ಕಾನೂನು ಅಪ್ರಸ್ತುತವಾಗಿದ್ದು ಕಂಡು ಬಂದಿತ್ತು. ಆ ಪೈಕಿ ಐದು ತಿಂಗಳ ಅವಧಿಯಲ್ಲಿ ಒಟ್ಟು 1070 ಕಾನೂನುಗಳನ್ನು ತೆಗೆದುಹಾಕಲಾಗಿದೆ. ಈ ಮೂಲಕ ಕಾನೂನು ಇಲಾಖೆಯಲ್ಲೂ ಮಹತ್ತರ ಬದಲಾವಣೆ ಆಗಿವೆ ಎಂದು ಅವರು ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು.

ಅಪಪ್ರಚಾರ: ಭೂ ಸ್ವಾಧೀನ ಸುಗ್ರೀವಾಜ್ಞೆ ಕುರಿತು ಅಪಪ್ರಚಾರ ನಡೆಯುತ್ತಿದೆ. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯಿಂದ ಭೂ ಸ್ವಾಧೀನ ಪ್ರಕ್ರಿಯೆ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ರೈತ ಸ್ನೇಹಿಯಾದ ಕಾಯ್ದೆಯನ್ನು ತಮ್ಮ ಸರ್ಕಾರ ಜಾರಿಗೆ ತಂದಿದೆ. ಅದನ್ನು ಎಲ್ಲ ರಾಜ್ಯಗಳು ಒಪ್ಪಿಕೊಂಡಿವೆ. ಆದರೆ,ಕೆಲವು ಕಡೆಗಳಲ್ಲಿ ಕೇವಲ ರಾಜಕೀಯದ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳಿದರು.

ಬಾಂಗ್ಲಾ-ಭಾರತ ಗಡಿ ವಿವಾದ ಬಗೆಹರಿಸಲಾಗಿದೆ. ಅಕ್ರಮ ನುಸುಳಿಕೆಗೆ ಕಡಿವಾಣ ಬಿದ್ದಿದೆ. ಚೀನಾ ಪ್ರವಾಸದ ಸಂದರ್ಭದಲ್ಲಿ ಗಡಿ ವಿವಾದ ಪ್ರಸ್ತಾಪಕ್ಕೆ ಬಂದಿದೆ. ಪಾಕಿಸ್ತಾನ ಜತೆ ಮಾತುಕತೆ ನಡೆಸಲಾಗಿದೆ.

ನೆರೆ ರಾಜ್ಯಗಳ ಜತೆ ಸ್ನೇಹಯುತ ವಾತಾವರಣ ಮೂಡಿಸಲಾಗುತ್ತಿದೆ. ವಿದೇಶ ಪ್ರವಾಸಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ,ದೇಶದ ಕೈಗಾರಿಕೆ ಸೇರಿದಂತೆ ವಿವಿಧ ವಲಯಕ್ಕೆ ಭಾರೀ ಪ್ರಮಾಣದ ಬಂಡವಾಳ ಹರಿದು ಬರುವಂತೆ ಮಾಡಿದ್ದಾರೆ.ಬಂಡವಾಳ ಹೂಡಿಕೆ ದೇಶದ ಭವಿಷ್ಯವನ್ನು ಬದಲಾಯಿಸಲಿದೆ. ಕೋಟ್ಯಂತರ ಯುವಕರಿಗೆ ಉದ್ಯೋಗ ಸಿಗಲಿದೆ. ಮಾರುಕಟ್ಟೆ ವಿಸ್ತರಣೆಯಾಗಲಿದೆ.

ಭೂಮಿ ನೀಡದ ರಾಜ್ಯ
ರಾಜ್ಯದಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಐನೂರು ಎಕರೆ ಭೂಮಿ ಕೇಳುತ್ತಿದ್ದರೂ,ರಾಜ್ಯ ಸರ್ಕಾರ ಅದನ್ನು ಒದಗಿಸಲು ಆಸಕ್ತಿ ತೋರಿಸುತ್ತಿಲ್ಲ. ಹಾಗೆಯೇ ಬೆಂಗಳೂರು ನಗರದಲ್ಲಿ ಉಪ ನಗರ ರೈಲು ಯೋಜನೆಗೂ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಆರೋಪಿಸಿದರು.
ಹಣಕಾಸು ನೆರವಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದುರುದ್ದೇಶಪೂರ್ವಕವಾಗಿ ಕೇಂದ್ರದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಖರ್ಗೆ ಅವರು ಕೂಡ ಕೇಂದ್ರದ ಅನುದಾನದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.

ಕಳೆದ ವರ್ಷ ಕೇಂದ್ರದಿಂದ 29.265 ಕೋಟಿ ರೂಪಾಯಿ ಅನುದಾನ ರಾಜ್ಯಕ್ಕೆ ಬಂದಿದೆ. ಆದರೂ ಅವರು ಕೇಂದ್ರ ನೆರವು ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಗಣಿತದ ಜ್ಞಾನವೇ ಇಲ್ಲ. ದಾಬೋಲ್-ಬಿಡದಿ ಗ್ಯಾಸ್ ಪೈಪ್ ಲೈನ್ ಯೋಜನೆ ಸರ್ಕಾರದ ಅಸಹಕಾರದಿಂದಲೇ ನೆನೆಗುದಿಗೆ ಬಿದ್ದಿದೆ. ರಾಜ್ಯದ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ,ಈ ಬಗ್ಗೆ ಒಪ್ಪಂದಕ್ಕೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಸಹಿಹಾಕಿಲ್ಲ ಎಂದು ದೂರಿದರು.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com