
ಬಾಳೆಹೊನ್ನೂರು:ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳು ಗೋ ಮಾಂಸ ಭಕ್ಷಣೆ ಚರ್ಚೆಯಲ್ಲಿದ್ದಾರೆ. ಇದನ್ನು ಕೈ ಬಿಟ್ಟು ರೈತರ ಸಾವಿನ ಕುರಿತು ಗಂಭೀರವಾಗಿ ಚಿಂತಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದೆರಡು ವರ್ಷಗಳಲ್ಲಿ ಸುಮಾರು 605 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರ ಈ ವಿಚಾರ ನಿರ್ಲಕ್ಷಿಸುತ್ತಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಬೆಳೆ ನಷ್ಟ, ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರು ಮತ್ತವರ ಕುಟುಂಬಗಳಿಗೆ ಆತ್ಮ ವಿಶ್ವಾಸ ತುಂಬಬೇಕು ಎಂದರು.
ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳಿವೆ. ಆದರೆ ಸರ್ಕಾರ 19 ಲಕ್ಷ ರೈತ ಕುಟುಂಬಗಳಿಗೆ ಮಾತ್ರ ಸಾಲ ಸೌಲಭ್ಯ ನೀಡಿದೆ. ಇನ್ನುಳಿದ ರೈತರು ಖಾಸಗಿ ವಲಯದಲ್ಲಿ ಸಾಲ ಮಾಡಿಕೊಂಡು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ರೈತರಿಗೆ ಪರಿಹಾರ ನೀಡುವಲ್ಲ ವಿಫಲವಾಗಿದೆ. ರಾಜ್ಯದಲ್ಲಿ ಜೆಡಿಎಸ್ ವತಿಯಿಂದ ಆತ್ಮಹತ್ಯೆಯಾದ ಪ್ರತಿಕುಟುಂಬಕ್ಕೂ ರೂ. 50 ಸಾವಿರ ನೀಡಲಾಗಿದೆ ಎಂದರು.
ಹಾಸ್ಯಾಸ್ಪದ: ಬಿಜೆಪಿ ನಾಯಕರು ಅವರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿರಲಿಲ್ಲ. ಇದೀಗ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ. ಕೇಂದ್ರ ಸರ್ಕಾರವೂ ಈ ಕುರಿತು ಚಕಾರ ಎತ್ತದಿರುವುದು ನಾಚಿಕೆಗೇಡಿನ ಸಂಗತಿ.
ರಾಜ್ಯಕ್ಕೆ ರಾಹುಲ್‍ಗಾಂಧಿ ಆಗಮಿಸಿ ದಾಗಲೂ ಸುಸ್ತಿ ಬಡ್ಡಿ ಮನ್ನಾ ಮಾಡುವ ವಿಚಾರವಾಗಿ ಚರ್ಚಿಸಿಲ್ಲಯ ಗಾಗಿ ರಾಜ್ಯದಲ್ಲಿ, ರೈತರ ಪರ ಜನಪರ ಕಾಳಜಿಯುಳ್ಳ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶ ಜನತೆಯ ಮುಂದಿದೆ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.
Advertisement