ಮುಂದಿನ ಅಧಿವೇಶನದಲ್ಲಿ ಮಾಣಿಪ್ಪಾಡಿ ವರದಿ ಮಂಡನೆ

ಬಿಜೆಪಿ ಸದಸ್ಯ ಗೋ.ಮಧುಸೂದನ್‍ರ ದೀರ್ಘ ಕಾಲದ ಧರಣಿಗೆ ತಲೆಬಾಗಿದ ಸರ್ಕಾರವು, ವಕ್ಫ್ ಹಗರಣ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಿದೆ...
ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಧಾನ ಪರಿಷತ್: ಬಿಜೆಪಿ ಸದಸ್ಯ ಗೋ.ಮಧುಸೂದನ್‍ರ ದೀರ್ಘ ಕಾಲದ ಧರಣಿಗೆ ತಲೆಬಾಗಿದ ಸರ್ಕಾರವು, ವಕ್ಫ್ ಹಗರಣ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಿದೆ.

ವಕ್ಫ್ ಆಸ್ತಿ ಅವ್ಯವಹಾರ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಒತ್ತಾಯಿಸಿ ಗೋ ಮಧುಸೂದನ್ ಸತತ ಎರಡೂ ಕಾಲು ತಾಸು ಸದನ ಬಾವಿಯಲ್ಲಿ ಧರಣಿ ಕುಳಿತರು. ಆರಂಭದಲ್ಲಿ ಈ ಧರಣಿಯಿಂದ ದೂರ ಉಳಿದ ಬಿಜೆಪಿ ಸದಸ್ಯರು ಪೂರ್ವಾಹ್ನದ ಕೊನೆಯಲ್ಲಿ ಮಧುಸೂದನ್ ಬೆಂಬಲಕ್ಕೆ ನಿಂತು ತಾವೂ ಸದನ ಬಾವಿಗೆ ಧುಮುಕಿದರು.

ಊಟದ ವಿರಾಮದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾನಾಯಕ ಎಸ್.ಆರ್.ಪಾಟೀಲ್, ಈಶ್ವರಪ್ಪನವರು ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ವಿಚಾರವಾಗಿಯೇ ಚರ್ಚಿಸಿದರು. ಸರ್ಕಾರವು ಮುಂದಿನ ಅಧಿವೇಶನ ಅಥವಾ ಬಜೆಟ್ ಅಧಿವೇಶನದಲ್ಲಿ ವರದಿ ಮಂಡಿಸುವ ಭರವಸೆ ನೀಡಿತು. ಅಪರಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಗೋ.ಮಧುಸೂದನ್ ಅವರೊಂದಿಗೆ ಸದನ ಬಾವಿಯಲ್ಲೇ ಧರಣಿ ನಿರತರಾಗಿದ್ದರು. ನಂತರ ಈಶ್ವರಪ್ಪನವರು ವಿಷಯ ಪ್ರಸ್ತಾಪಿಸಿ ಮಧುಸೂದನ್ ಮನವೊಲಿಸಿದರು.

ಬೆಳಗ್ಗೆ ಮಾತನಾಡಿದ ಮಧುಸೂದನ್, ವಕ್ಫ್ ಆಸ್ತಿ ಅವ್ಯವಹಾರ ಕುರಿತ ವರದಿಯನ್ನು ಮಂಡಿಸುವಂತೆ ಸಭಾಪತಿ ರೂಲಿಂಗ್ ಕೊಟ್ಟಿದ್ದಾರೆ. ಅಲ್ಲದೇ ಸರ್ಕಾರವೇ ನ್ಯಾಯಾಲಯದಲ್ಲಿ ವರದಿ ಮಂಡಿಸುವುದಾಗಿ ಅಫಿಡವಿಟ್ ಸಲ್ಲಿಸಿದೆ. ಹೀಗಿದ್ದರೂ ವರದಿ ಮಂಡನೆಗೆ ಸರ್ಕಾರ ಹಿಂದೇಟು ಹಾಕುತ್ತಿದೆ. ಮಂಡಿಸುವವರೆಗೆ ಧರಣಿಯಿಂದ ಹಿಂದೆ ಸರಿಯಲ್ಲ ಎಂದು ಸದನದ ಬಾವಿಯಲ್ಲಿ ಕುಳಿತುಬಿಟ್ಟರು. ಆರಂಭದಲ್ಲಿ ಈಶ್ವರಪ್ಪ, ಎಸ್.ಆರ್.ಪಾಟೀಲ್ ಮತ್ತು ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಮಧುಸೂದನ್ ಮನವೊಲಿಸುವ ಪ್ರಯತ್ನ ಮಾಡಿದರೂ ಬಗ್ಗದಿದ್ದಾಗ ಪ್ರಶ್ನೋತ್ತರ ಅವಧಿ ಮುಂದುವರಿಸಲಾಯಿತು. ಮಧುಸೂದನ್‍ರನ್ನು ಬಿಜೆಪಿ ಸದಸ್ಯರಿಗಿಂತ ಜೆಡಿಎಸ್ ನ ಹಲವು ಸದಸ್ಯರು ಮನವೊಲಿಸಲು ಪ್ರಯತ್ನ ನಡೆಸಿದ್ದು ವಿಶೇಷವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com