
ವಿಧಾನಸಭೆ: ರೈತರ ಆತ್ಮಹತ್ಯೆಗೆ ಸಾಲ ಮತ್ತು ಬರ ಕಾರಣವಲ್ಲ ಎಂಬ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದ ಶಾಸಕ ಅಶೋಕ್ ಖೇಣಿ ವಿಧಾನಸಭೆಯಲ್ಲೂ ಮತ್ತೆ ಇದೇ ಹೇಳಿಕೆ ಪುನರುಚ್ಚರಿಸಿ ಜೆಡಿಎಸ್ ಶಾಸಕರ ವಿರೋಧ ಎದುರಿಸುವಂತಾಯಿತು.
ಬರದ ಮೇಲಿನ ಚರ್ಚೆ ಸಂದರ್ಭದಲ್ಲಿ ಆರ್. ಎಸ್.ದೇಶಪಾಂಡೆ ಎಂಬುವರು ನೀಡಿದ ವರದಿ ಆಧರಿಸಿ ಮಾತನಾಡಿದ ಖೇಣಿ, ಶೇ.25ರಷ್ಟು ರೈತರು ಕುಡಿತ, ಜೂಜು, ಕಾಯಿಲೆಗಳಿಂದಲೂ ಮೃತಪಡುತ್ತಿದ್ದಾರೆ. ಹೀಗಾಗಿ ರೈತರ ಆತ್ಮಹತ್ಯೆ ವಿಚಾರದಲ್ಲಿ ಪರಿಹಾರ ನೀಡುವುದೇ ಪರಿಹಾರವಲ್ಲ ಎಂದು ಪ್ರತಿಪಾದಿಸಿದರು. ಇದಕ್ಕೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅದ್ಯಾವುದೋ ಹುಚ್ಚ ಕೊಟ್ಟ ವರದಿ ಇಟ್ಟುಕೊಂಡು ರೈತರ ಬಗ್ಗೆ ಮಾತನಾಡುತ್ತೀರಾ? ಇದೇ ಇದೇ ರೀತಿ ಮಾತನಾಡಿ ಬೈಸಿಕೊಂಡಿದ್ದು ಸಾಕಾಗಿಲ್ಲವೇ ? ಎಂದು ತರಾಟೆಗೆ ತೆಗೆದುಕೊಂಡ ರು. ಖೇಣಿ ತಮ್ಮ ಹೇಳಿಕೆ ವಾಪಸ್ ತೆಗೆದುಕೊಳ್ಳುವಂತೆ ಆಗ್ರಹಿಸಿ ಸ್ಪೀಕರ್ ಪೀಠದ ಮುಂದೆ ಪ್ರತಿಭಟನೆ ನಡೆಸಿದರು.
ಆದರೆ, ಹೇಳಿಕೆ ವಾಪಸ್ ಪಡೆಯುವುದಕ್ಕೆ ಖೇಣಿ ಸುತಾರಾಂ ಒಪ್ಪಲಿಲ್ಲ. ನಾನೇನು ತಪ್ಪು ಮಾತಾಡಿಲ್ಲ. ಆದರೆ ರೈತ ನಾಯಕರೇ ಹೆಚ್ಚಾಗಿರುವ ಹಾಸನ, ಮಂಡ್ಯ, ಮೈಸೂರಿನಲ್ಲೇ ಏಕೆ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ? ನಮ್ಮ ಬೀದರ್‍ನಲ್ಲಿ ಒಬ್ಬ ರೈತ ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಾಗ ಜೆಡಿಎಸ್ ನಾಯಕರು ಕ್ಷಣ ಹೊತ್ತು ತಬ್ಬಿಬ್ಬಾದರು. ಆದರೆ ಶಿವಲಿಂಗೇಗೌಡರು ಮಾತ್ರ ಪ್ರತಿಭಟನೆ ನಿಲ್ಲಿಸದೇ ಇದ್ದಾಗ ಸ್ಪೀಕರ್ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಎ.ಬಿ.ಮಾಲಕರೆಡ್ಡಿ ಅವರು ರೆಡ್ಡಿ ಖೇಣಿ ಅವರ ಪ್ರಸ್ತಾಪವನ್ನು ಕಡತದಿಂದ
ತೆಗೆದು ಹಾಕುವಂತೆ ಸೂಚಿಸಿದರು.
Advertisement