

ವಿಧಾನಸೌಧದಲ್ಲೇ ಆಗಾಗ ಪತ್ರಿಕಾಗೋಷ್ಠಿ ನಡೆಸುವ ನಾಯಕನೇ ಸದನಕ್ಕೆ ಕಾಲಿಡಲಿಲ್ಲ ಹೋರಾಟದ ಯೋಜನೆಯೂ ಇಲ್ಲ
ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭವಾಗಿ ವಾರವೇ ಕಳೆದರೂ ಸದನದಲ್ಲಿ ಜೆಡಿಎಸ್ ಸದ್ದೇ ಇಲ್ಲ! ಸದಾ ಸದನದಿಂದ ಹೊರಗೆ ಸದ್ದು ಮಾಡುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಗೆ ಬರಲೇ ಇಲ್ಲ.
ವಾರಕ್ಕೆ 3-4 ಬಾರಿ ವಿಧಾನ ಸೌಧದಲ್ಲೇ ಪತ್ರಿಕಾಗೋಷ್ಠಿಗಳನ್ನು ನಡೆಸಿ ಗುಡುಗುವ ಕುಮಾರಸ್ವಾಮಿ, ಅಲ್ಲೇ ವಾರದಿಂದಲೂ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ. ಈ ಬಗ್ಗೆ ಜೆಡಿಎಸ್ ಶಾಸಕರಲ್ಲೇ ಬೇಸರವಿದೆ. ಅಧಿವೇಶನ ಆರಂಭಕ್ಕೂ ಮುನ್ನ ರೈತರ ಆತ್ಮಹತ್ಯೆ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಡೆಸಿದ ರೈತ ಚೈತನ್ಯ ಯಾತ್ರೆಯನ್ನೂ ನಿರಂತರವಾಗಿ ಟೀಕಿಸುತ್ತಾ ಬಂದರು. ಆದರೆ ಅಧಿವೇಶನ ಆರಂಭವಾಗುತ್ತಿದ್ದಂತೆ ತಣ್ಣಗಾದರು. ಮಾಧ್ಯಮಗಳ ಮೂಲಕ ಸದ್ದು ಮಾಡುವುದನ್ನೂ ಕಡಿಮೆ ಮಾಡಿದರು. ಕಲಾಪ ನಡೆದ ಐದು ದಿನಗಳ ಪೈಕಿ ಒಮ್ಮೆಯಾದರೂ ಸದನದ ಒಳಗೆ ಪ್ರವೇಶಿಸಲಿಲ್ಲ. ಆರಂಭದ ಎರಡು ದಿನಗಳು ನಡೆದ ಸಂತಾಪ ಕಲಾಪದಲ್ಲೂ ಕಾಣಿಸಿಲ್ಲ.
ಇದರಿಂದಾಗಿ ಸದನದಲ್ಲಿ ಜೆಡಿಎಸ್ ಸದ್ದಡಗಿ ದಂತಾಗಿದೆ. ಸದನದಲ್ಲಿ ಬರ ಪರಿಸ್ಥಿತಿ ಚರ್ಚೆಯಾಗುತ್ತಿದ್ದು, ರೈತರು ಮತ್ತು ಗ್ರಾಮೀಣ ಜನರ ಬವಣೆಗಳು ಪ್ರತಿಧ್ವನಿಸುತ್ತಿವೆ. ಆದರೆ ಈ ಸಂದರ್ಭದಲ್ಲಿ ಜೆಡಿಎಸ್‍ನ ರೇವಣ್ಣ, ಚಲುವರಾಯಸ್ವಾಮಿ, ಕೊನರೆಡ್ಡಿ ಬಿಟ್ಟರೆ ಮತ್ತಾರೂ ಸದ್ದು ಮಾಡುತ್ತಿಲ್ಲ. ಸದನದಲ್ಲಿ ಬಿಜೆಪಿ ನಿರೀಕ್ಷಿತ ಹೋರಾಟ ನಡೆಸದಿದ್ದರೂ, ರೈತರ ಆತ್ಮಹತ್ಯೆ ಮತ್ತು ಕಾನೂನು, ಸುವ್ಯವಸ್ಥೆ ಎಂಬ ವಿಷಯಗಳನ್ನು ಆದ್ಯತೆ ಅನುಸಾರ ಕೈಗೆತ್ತಿಕೊಳ್ಳುತ್ತಿದೆ. ಆದರೆ ಆ ನಿಟ್ಟಿನಲ್ಲಿ ಜೆಡಿಎಸ್ ಯಾವುದೇ ತಂತ್ರಗಳನ್ನೇ ರೂಪಿಸಿಲ್ಲ. ಬದಲಾಗಿ ಸಂದರ್ಭಕ್ಕೆ ಅನುಗುಣವಾಗಿ ಹೋರಾಟ ನಡೆಸಿದರೆ ಆಯಿತು ಎನ್ನುವ ನಿಲುವಿನೊಂದಿಗೆ ತಟಸ್ಥವಾಗಿರುವಂತೆ ಕಾಣುತ್ತಿದೆ.