ಸಿದ್ದರಾಮಯ್ಯ-ರಾಹುಲ್ ಗಾಂಧಿ
ಸಿದ್ದರಾಮಯ್ಯ-ರಾಹುಲ್ ಗಾಂಧಿ

ಪಂಚಾಯತ್ ರಾಜ್ ವರದಿ ಜಾರಿಗೆ ತಾಕೀತು

ಕಾಂಗ್ರೆಸ್ ಶಾಸಕರ ವಿರೋಧ ಹಿನ್ನೆಲೆಯಲ್ಲಿ ಜಾರಿಯಾಗದೇ ಉಳಿದಿದ್ದ ಶಾಸಕ ರಮೇಶ್ ಕುಮಾರ್ ನೇತೃತ್ವದ ಪಂಚಾಯಿತ್ ರಾಜ್...
ಮಂಡ್ಯ: ಕಾಂಗ್ರೆಸ್ ಶಾಸಕರ ವಿರೋಧ ಹಿನ್ನೆಲೆಯಲ್ಲಿ ಜಾರಿಯಾಗದೇ ಉಳಿದಿದ್ದ ಶಾಸಕ ರಮೇಶ್ ಕುಮಾರ್ ನೇತೃತ್ವದ ಪಂಚಾಯಿತ್ ರಾಜ್ ಬಲವರ್ಧನೆ ವರದಿಯನ್ನು ರಾಹುಲ್ ಗಾಂಧಿ ಸೂಚನೆ ಪ್ರಕಾರ ಜಾರಿಗೆ ತರುವುದು ರಾಜ್ಯ ಸರ್ಕಾರಕ್ಕೆ ಈಗ ಅನಿವಾರ್ಯವಾಗಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೇ ಈ ವರದಿಯನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರಕ್ಕೆ ಶುಕ್ರವಾರ ಪಂಚಾಯಿತಿ ಪ್ರತಿನಿಧಿಗಳ ಸಮಾವೇಶದಲ್ಲಿ ಸೂಚನೆ ನೀಡಿದ್ದಾರೆ. 
ಈ ವರದಿ ಜಾರಿಗೆ ಬಂದರೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಶಾಸಕರಿಗೆ ಇರುವ ಹೆಚ್ಚಿನ ಅಧಿಕಾರ ಮೊಟಕುಗೊಂಡು ಸ್ಥಳೀಯ ಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ಸಿಗುತ್ತದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಶಾಸಕರೇ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ವರದಿ ಜಾರಿ ಅನಿವಾರ್ಯವಾಗಿ ಪರಿಣಮಿಸಿದೆ. 
ಏಕೆ ಹೀಗಾಯ್ತು?: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕಾಗಿ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ವಿವಿಧ ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಯ ಕಾಂಗ್ರೆಸ್ ಪ್ರತಿನಿಧಿಗಳು ಶಾಸಕ ರಮೇಶ್ ಕುಮಾರ್ ನೇತೃತ್ವದ ಪಂಚಾಯಿತ್ ರಾಜ್ ತಿದ್ದುಪಡಿ ವರದಿಯನ್ನು ಜಾರಿಗೆ ತರುವಂತೆ ಆಗ್ರಹಿಸಿದರು. ಇದರಿಂದ ಪಂಚಾಯಿತ್ ವ್ಯವಸ್ಥೆ ಬಲಪಡಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ವಾದಿಸಿದರು. 
ಪಂಚಾಯಿತ್ ಪ್ರತಿನಿಧಿಗಳ ಈ ವಾದ ತಕ್ಷಣಕ್ಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಮಾತ್ರವಲ್ಲ ಪಂಚಾಯಿತ್ ಪ್ರತಿನಿಧಿಗಳ ಭಾಷಣಕ್ಕೆ ಸಭಿಕರಿಂದ ಚಪ್ಪಾಳೆಯ ಸುರಿಮಳೆಯೂ ವ್ಯಕ್ತವಾಯಿತು. ಇದರಿಂದ ಕುತೂಹಲಗೊಂಡ ರಾಹುಲ್ ಗಾಂಧಿ, ಪಂಚಾಯಿತ್ ಪ್ರತಿನಿಧಿಗಳು ಮಾತನಾಡಿದ ವಿಚಾರ ಯಾವುದು? ಎಂದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಂದ ಮಾಹಿತಿ ಪಡೆದರು. ಆ ಬಳಿಕ ಸಿಎಂ ಸಿದ್ದರಾಮಯ್ಯ ಅವರತ್ತ ತಿರುಗಿ ಈ ವರದಿಯಲ್ಲಿ ಇರುವ ಅಂಶಗಳು ಯಾವುದು? ವರದಿ ಜಾರಿಗೆ ಏನಾದರೂ ತೊಡಕಿದೆಯೇ ? ಎಂದು ಪ್ರಶ್ನಿಸಿದರು. 
ಇದಕ್ಕೆ ಸಂಬಂಧಪಟ್ಟ ಮಾಹಿತಿ ಯನ್ನು ಸಿದ್ದರಾಮಯ್ಯ ನೀಡಿದರು. ವರದಿ ಜಾರಿ ಮಾಡಿ: ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಆರಂಭದಲ್ಲಿಯೇ ಪಂಚಾಯಿತ್ ರಾಜ್ ಬಲವರ್ಧನೆಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ರಮೇಶ್ ಕುಮಾರ್ ವರದಿ ಯನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಜಾರಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದರು. ಪಂಚಾಯಿತ್ ಬಲವರ್ಧನೆಗೆ ಎಷ್ಟು ಅಧಿಕಾರ ಸಿಗಬೇಕೋ ಅಷ್ಟು ಅಧಿಕಾರ ಸಿಕ್ಕಿಲ್ಲ. ನಿಮ್ಮ ಮನವಿ ಹಿನ್ನೆಲೆಯಲ್ಲಿ ನಾನು ಸಿಎಂ ಸಿದ್ದರಾಮಯ್ಯ ಅವರ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ವರದಿಯಲ್ಲಿರುವ ಶಿಫಾರಸುಗಳನ್ನು ಬೇಗ ಜಾರಿಗೆ ತರುವುದಾಗಿ ಅವರೂ ಹೇಳಿದ್ದಾರೆ. 
ರಮೇಶ್ ಕುಮಾರ್ ಸಮಿತಿ ವರದಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಜಾರಿಗೆ ಬರುತ್ತದೆ ಎಂದು ಹೇಳಿದರು. ಒಪ್ಪಿದ ಮುಖ್ಯಮಂತ್ರಿ: ವೇದಿಕೆಗೆ ರಾಹುಲ್ ಆಗಮಿ ಸುತ್ತಿ ದ್ದಂತೆ ಪಂಚಾಯಿತಿ ಪ್ರತಿನಿಧಿಗಳಿಗೆ ತಮ್ಮ ಅನಿಸಿಕೆಯನ್ನು ಹೇಳುವಂತೆ ಆಹ್ವಾನಿಸಲಾಯಿತು. 
ಮಹೇಶ್ ಮಂಡೆಗದ್ದೆ, ನರಗುಂದದ ಪ್ರೇಮಾ ತಿಮ್ಮಣ್ಣ ಗೌಡರ್, ಮಹೇಶ್, ಜ್ಯೋತಿ ಎಂ.ಸಾಗರ್ ಅವರು ರಮೇಶ್ ಕುಮಾರ್ ವರದಿ ಅನು ಷ್ಠಾನಕ್ಕೆ ಆಗ್ರಹಿಸಿದ್ದರಿಂದ ಈ ವಿಚಾರ ಚರ್ಚೆಗೆ ಬರುವಂತಾಯಿತು. ರಾಹುಲ್ ಭಾಷಣಕ್ಕೆ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರಮೇಶ್ ಕುಮಾರ್ ವರದಿ ಅನುಷ್ಠಾನಕ್ಕೆ ಸರ್ಕಾರ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com