ಹಿಂಗೆ ಕೊಟ್ಟಂಗೇ ಚೆಕ್ ಕಿತ್ಕೊಂಡ್ರು

ಸಣಬದಕೊಪ್ಪಲಿನ ರೈತ ಲೋಕೇಶ್ ಕುಟುಂಬಕ್ಕೆ ರಾಹುಲ್ ಗಾಂಧಿ ಶುಕ್ರವಾರ ನೀಡಿದ್ದ ರು.1 ಲಕ್ಷ ಪರಿಹಾರದ ಚೆಕ್ ಕೆಪಿಸಿಸಿಗೆ ವಾಪಸ್...
ರಾಹುಲ್ ಗಾಂಧಿ (ಕೃಪೆ: ಕೆಪಿಎನ್)
ರಾಹುಲ್ ಗಾಂಧಿ (ಕೃಪೆ: ಕೆಪಿಎನ್)
ಮಂಡ್ಯ: ಸಣಬದಕೊಪ್ಪಲಿನ ರೈತ ಲೋಕೇಶ್ ಕುಟುಂಬಕ್ಕೆ ರಾಹುಲ್ ಗಾಂಧಿ ಶುಕ್ರವಾರ ನೀಡಿದ್ದ ರು.1 ಲಕ್ಷ ಪರಿಹಾರದ ಚೆಕ್ ಕೆಪಿಸಿಸಿಗೆ ವಾಪಸ್ ತಲುಪಿದೆ. ``ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಿತ್ತುಕೊಂಡು ಹೋದ್ರು... ಕೇವಲ ಪ್ರಚಾರಕ್ಕಾಗಿಯೇ ಕಾಂಗ್ರೆಸ್‍ನವರು ಈ ಚೆಕ್ ನೀಡಿದ್ದಾರೆ,ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರನಡುವೆಯೇ ಪರಿಹಾರದ ಹಣ  ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಮೃತ ಲೋಕೇಶ್ಅವರ ಕುಟುಂಬಸ್ಥರು.  
ನಡೆದದ್ದೇನು?: ಸಣಬದ ಕೊಪ್ಪಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮೃತ ರೈತ ಲೋಕೇಶ್ ಅವರ ಪತ್ನಿಗೆ  ರು.1 ಲಕ್ಷದ ಚೆಕ್ ನೀಡಿದ್ದರು. ದೊಡ್ಡ ದೊಡ್ಡ ನಾಯಕರೇ ಮನೆ ಬಳಿಗೆ ಬಂದಿದ್ದ ಗಲಿಬಿಲಿಯಲ್ಲಿ ಲೋಕೇಶ್ ಪತ್ನಿ ಚೆಕ್ ಅನ್ನು ಜಗುಲಿ  ಮೇಲೆಯೇ ಬಿಟ್ಟುಬಿಟ್ಟಿದ್ದಾರೆ. ಜಗುಲಿ ಮೇಲೆ ಚೆಕ್ ಬಿದ್ದಿದ್ದನ್ನು ಗಮನಿಸಿದ್ದ ಸಚಿವ ಅಂಬರೀಷ್, ಆ ಚೆಕ್‍ನ್ನು ಸಂಸದ ಪುಟ್ಟರಾಜು ಕೈಗಿಟ್ಟು, ಲೋಕೇಶ್ ಪತ್ನಿ ಖಾತೆಗೆ ಜಮೆ ಮಾಡುವಂತೆ ಸೂಚಿಸಿದ್ದರು. ಇದಾದ ಕೆಲ ಹೊತ್ತಿನ ನಂತರ ಸಚಿವ ಅಂಬರೀಷ್ ಪುಟ್ಟರಾಜು ಅವರಿಗೆ ಕರೆ ಮಾಡಿ, ಚೆಕ್‍ನ್ನು ವಾಪಸ್ ಕಳುಹಿಸುವಂತೆ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಪುಟ್ಟರಾಜು ಅವರು ಚೆಕ್ ಅನ್ನು ಅಂಬರೀಷ್‍ಗೆ ತಲುಪಿಸಿದ್ದಾರೆ. ಚೆಕ್ ನೇರವಾಗಿ ಕಾಂಗ್ರೆಸ್ ಕಚೇರಿಗೆ ಹೋಗಿದೆ ಎನ್ನಲಾಗಿದೆ. ಚೆಕ್ ಈ ವರೆಗೆ ನಮ್ಮ ಕೈಸೇರಿಲ್ಲ ಎನ್ನುತ್ತಾರೆ ಲೋಕೇಶ್ ಅವರ ಕುಟುಂಬಸ್ಥರು. 
ರಾಹುಲ್‍ಗಾಂಧಿ ನೀಡಿದ್ದ ಪರಿಹಾರ ಚೆಕ್ ಅನ್ನು ವಾಪಸ್ ಪಡೆಯುವ ಮೂಲಕ ಮಾಜಿ ಸಂಸದೆ ರಮ್ಯಾ ಸಣ್ಣತನ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಿಂದ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಮೇಲೆ ಒತ್ತಡ ತಂದು ರಮ್ಯಾ ಚೆಕ್ ವಾಪಸ್ ಪಡೆದಿದ್ದಾರೆ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಿ, ಜಿಲ್ಲೆಯ ಜನರಿಗೆ ಅವಮಾನ ಮಾಡಿದ್ದಾರೆ.
-ಪುಟ್ಟರಾಜು ಮಂಡ್ಯ ಸಂಸದ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com