ಉಡುಪಿ: ದೆಹಲಿಗಿಂತ ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೆಚ್ಚು ಆಸಕ್ತಿ ವಹಿಸಿರುವಂತೆ ಕಾಣುತ್ತದೆ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಲು ಅವರು ಹೆಚ್ಚಿನ ಮುತುವರ್ಜಿ ತೋರಿಸುತ್ತಿದ್ದಾರೆ. ಬುಧವಾರ ಉಡುಪಿ ಭೇಟಿ ವೇಳೆ ಕೂಡ ಅದೇ ಮಾತುಗಳನ್ನು ಪುನರಾವರ್ತಿಸಿದ್ದಾರೆ. ಹೀಗಾಗಿ, ಹಾಲಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅಧಿಕಾರಾವಧಿ ಮುಕ್ತಾಯಗೊಂಡ ಬಳಿಕ ತೆರವಾಗುವ ಸ್ಥಾನಕ್ಕೆ ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವ ಯತ್ನವನ್ನೂ ಮಾಡುತ್ತಿದ್ದಾರೆ ಶಿವಮೊಗ್ಗ ಸಂಸದ. ಉಡುಪಿಯಲ್ಲಿ ಯಡಿಯೂರಪ್ಪ ಹೇಳಿ ದ್ದಿಷ್ಟು ``ರಾಜ್ಯಾಧ್ಯಕ್ಷನಾಗುವುದಕ್ಕೆ ಸಿದ್ಧ ಅದಕ್ಕೆ ನಾನು ಯಾರೊಂದಿಗೂ ಸ್ಪರ್ಧೆ ನಡೆಸುತ್ತಿಲ್ಲ. ಪಕ್ಷದ ಹಿರಿಯರು ಅವಕಾಶ ನೀಡಿದರೆ ಪ್ರಾಮಾಣಿಕವಾಗಿ ಆ ಹೊಣೆ ಯನ್ನು ಹೊರಲು ಸಿದ್ಧನಿದ್ದೇನೆ'' ಎಂದರು.