ಕೈಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದ ರಫ್ತು ಪ್ರಮಾಣ ಹೆಚ್ಚಿದೆ: ಸಿದ್ದರಾಮಯ್ಯ

ರ್ನಾಟಕ ದೇಶದಲ್ಲೇ ಕೈಗಾರಿಕೆ ಕ್ಷೇತ್ರದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ....
ಸಿಎಂ ಸಿದ್ದರಾಮಯ್ಯರಿಂದ  ಉದ್ಯಮಿಗಳಿಗೆ ಸನ್ಮಾನ ಸಮಾರಂಭ
ಸಿಎಂ ಸಿದ್ದರಾಮಯ್ಯರಿಂದ ಉದ್ಯಮಿಗಳಿಗೆ ಸನ್ಮಾನ ಸಮಾರಂಭ

ಬೆಂಗಳೂರು: ಕರ್ನಾಟಕ ದೇಶದಲ್ಲೇ ಕೈಗಾರಿಕೆ ಕ್ಷೇತ್ರದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆದ 2014-15ನೇ ಸಾಲಿನ ಶ್ರೇಷ್ಠ ರಫ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ''2015-16ನೇ ಸಾಲಿನಲ್ಲಿ ದೇಶದ ರಫ್ತು ಪ್ರಮಾಣ ಶೇ 8.9ರಷ್ಟು ಕುಸಿತ ಕಂಡಿದ್ದರೂ, ರಾಜ್ಯದಿಂದ 19,273 ದಶಲಕ್ಷ ಡಾಲರ್‌ನಷ್ಟು ಉತ್ಪನ್ನ ರಫ್ತು ಮಾಡಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಎಂ.ವಿಶ್ವೇಶ್ವರಯ್ಯ ಅವರ ಕೈಗಾರಿಕೆ ಚಿಂತನೆಗಳನ್ನಾಧರಿಸಿ ಸರಕಾರ ಕೈಗಾರಿಕೆ ಕ್ಷೇತ್ರಕ್ಕೆ ಒತ್ತು ನೀಡಲಿದೆ,'' ಎಂದರು.

''ಐಟಿ-ಬಿಟಿ ಕ್ಷೇತ್ರದಲ್ಲಿ ರಾಜ್ಯ ದಶಕಗಳಿಂದ ಮೊದಲ ಸ್ಥಾನದಲ್ಲೇ ಮುನ್ನಡೆದಿದೆ. ದೇಶದ ಒಟ್ಟಾರೆ ರಫ್ತಿನಲ್ಲಿ 2015-16ರ ಸಾಲಿಗೆ ಶೇ 36.5(60,255 ಅಮೆರಿಕನ್‌ ಡಾಲರ್‌)ರಷ್ಟು ಪಾಲು ಹೊಂದಲಾಗಿದೆ. ಉದ್ಯಮಸ್ನೇಹಿ ವಾತಾವರಣದಿಂದಾಗಿ ಎಫ್‌ಡಿಐನಲ್ಲೂ ರಾಜ್ಯ ಮುಂದಿದೆ,'' ಎಂದರು.

''ಮೂರು ವರ್ಷದ ಹಿಂದೆ ತಮ್ಮ ಸರಕಾರ ಅಧಿಕಾರಕ್ಕೇರಿದ ವೇಳೆ ಕೈಗಾರಿಕೆಗೆ ಉತ್ತೇಜನ ಸಿಗದು ಎಂದು ಟೀಕಾಕಾರರು ಬೊಬ್ಬೆ ಹಾಕಿದ್ದರು. ಇತರೆ ಮುಂಚೂಣಿ ರಾಜ್ಯಗಳನ್ನು ಹಿಂದಿಕ್ಕಿ ಉದ್ದಿಮೆ ಸ್ನೇಹಿ ವಾತಾವರಣ ಮೂಡಿಸಿದ್ದರ ಫಲವಾಗಿ ಕೈಗಾರಿಕೆ ಬೆಳೆವಣಿಗೆ ಸಾಧ್ಯವಾಗಿದೆ. ಕೈಗಾರಿಕೆ ಬೆಳವಣಿಗೆಯ ಪ್ರಮಾಣ ಹೆಚ್ಚಳದಿಂದಾಗಿ ಟೀಕಾಕಾರರ ಮಾತುಗಳಿಗೆ ಬ್ರೇಕ್‌ ಬಿದ್ದಿದೆ,'' ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಈ ವೇಳೆ 2014-15ನೇ ಸಾಲಿನಲ್ಲಿ ಸಾಧನೆ ತೋರಿರುವ 61 ಉದ್ದಿಮೆಗಳಿಗೆ 'ಶ್ರೇಷ್ಠ ರಫ್ತು ಪ್ರಶಸ್ತಿ'ಯನ್ನು ಸಿಎಂ ವಿತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com