
ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಪಾಕ್ ಪರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು ನಟಿ ರಮ್ಯಾ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಕೆಲ ಒಳ್ಳೆಯ ಜನರು ಪಾಕಿಸ್ತಾನದಲ್ಲಿ ಇದ್ದಾರೆ. ಅವರು ಭಾರತದ ಜೊತೆ ಉತ್ತಮ ಬಾಂಧವ್ಯ ಬೆಳೆಸಲು ಬಯಸಿದ್ದಾರೆ. ಆದರೆ ಎರಡು ದೇಶಗಳಲ್ಲಿರುವ ಮೂಲಭೂತವಾದಿಗಳಿಂದಾಗಿ ಎರಡು ದೇಶಗಳ ಬಾಂಧವ್ಯ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಕುರಿತು ನಟಿ ರಮ್ಯಾ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ರಾಮ ಮಂದಿರ ವಿಷಯವನ್ನು ರಾಜಕೀಯಗೊಳಿಸಿದ ಬಿಜೆಪಿ ನಾಯಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ದೇವೇಗೌಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಇನ್ನು ನಟಿ ರಮ್ಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಮ್ಯಾ ಯಾವುದೇ ಕಾರಣಕ್ಕೂ ಕ್ಷಮಾಪಣೆ ಕೇಳುವುದಿಲ್ಲ ಎಂದು ಹೇಳಿದ್ದಾರೆ. ರಮ್ಯಾ ವಿರುದ್ಧ ಮಡಿಕೇರಿಯಲ್ಲಿ ದೇಶದ್ರೋಹದ ಕೇಸು ದಾಖಲಾಗಿದ್ದು,ಶನಿವಾರ ವಿಚಾರಣೆ ನಡೆಯಲಿದೆ.
Advertisement