
ನವದೆಹಲಿ: ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಮಾಜಿ ಅಬಕಾರಿ ಸಚಿವ ಎಚ್ ವೈ ಮೇಟಿ ಅವರ ರಾಸಲೀಲೆ ಪ್ರಕರಣ ಇದೀಗ ರಾಷ್ಟ್ರರಾಜಧಾನಿ ದೆಹಲಿಯಲ್ಲೂ ಸುದ್ದಿ ಮಾಡುತ್ತಿದ್ದು, ವಿಡಿಯೋ ಕುರಿತು ಮಾಹಿತಿ ನೀಡುವಂತೆ ಕಾಂಗ್ರೆಸ್ ಪಕ್ಷದ ಅಸಂತುಷ್ಟ ನಾಯಕರು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರ ಹಿಂದೆ ಬಿದ್ದಿದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಕರಣವನ್ನು ಬಯಲಿಗೆಳೆದ ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರೇ ಸ್ವತಃ ಪ್ರತಿಕ್ರಿಯಿಸಿದ್ದು, ದೆಹಲಿಯಲ್ಲಿ ತಮ್ಮ ಕೆಲ ಕಾಂಗ್ರೆಸ್ ಮುಖಂಡ ಭೇಟಿಯಾಗಿ ವಿಡಿಯೋ ಕುರಿತು ಮಾಹಿತಿ ಕೇಳಿದ್ದರು ಎಂದು ಹೇಳಿದ್ದಾರೆ. ಆದರೆ ಅವರ ಹೆಸರುಗಳನ್ನು ನಾನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಅಂತೆಯೇ ರಾಸಲೀಲೆ ವಿಡಿಯೋ ತಮ್ಮ ಬಳಿ ಇಲ್ಲ ಎಂದು ರಾಜಶೇಖರ್ ಮುಲಾಲಿ ಹೇಳಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸಮಾಧಾನದಿಂದ ಇರುವ ಕಾಂಗ್ರೆಸ್ ಪಕ್ಷದ ಕೆಲ ಹಿರಿಯ ಮುಖಂಡರೂ ಕೂಡ ಮೇಟಿ ರಾಸಲೀಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮತ್ತು ಅವರ ಗ್ಯಾಂಗ್ ಅನ್ನು ಹಣಿಯಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಎರಡನೇ ಬಾರಿ ಸರ್ಕಾರ ಮುಜುಗರಕ್ಕೀಡಾಗಿದ್ದು, ಮೇಟಿ ಪ್ರಕರಣದಿಂದಾಗಿ ಇದೀಗ ಸಿದ್ದರಾಮಯ್ಯ ಸರ್ಕಾರ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದೆ. ಅಂತೆಯೇ ಮೇಟಿ ಪ್ರಕರಣ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದ್ದು, ಇದನ್ನೇ ದೆಹಲಿ ಸಭೆಯಲ್ಲೂ ಪ್ರಸ್ತಾಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಒತ್ತಡಕ್ಕೆ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.
ಕೇವಲ ಕಾಂಗ್ರೆಸ್ ಮುಖಂಡರು ಮಾತ್ರವಲ್ಲದೇ ಮೇಟಿ ರಾಸಲೀಲಿ ವಿಡಿಯೊಗಾಗಿ ಬಿಜೆಪಿ ಪಕ್ಷದ ಕೆಲ ಮುಖಂಡರೂ ಕೂಡ ತಮ್ಮ ಬೆನ್ನ ಹಿಂದೆ ಬಿದ್ದದರು ಎಂಬ ಅಂಶವನ್ನು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಬಹಿರಂಗಪಡಿಸಿದ್ದಾರೆ. ಒಂದೆಡೆ ಅಸಂತುಷ್ಟ ಸ್ವಪಕ್ಷೀಯರು, ಮತ್ತೊಂದೆಡೆ ವಿರೋಧ ಬಣಗಳಿಗೆ ಮೇಟಿ ರಾಸಲೀಲೆ ಪ್ರಕರಣ ಸಿದ್ಧರಾಮಯ್ಯ ಸರ್ಕಾರವನ್ನು ಹಣಿಯಲು ಸಿಕ್ಕ ಪ್ರಮುಖ ಅಸ್ತ್ರವಾಗಿ ಪರಿಣಮಿಸುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಟಿಪ್ಪು ಜಯಂತಿ ಆಚರಣೆ ವೇಳೆ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವಾಗಿ ಕ್ಯಾಮೆರಾಗಳ ಕಣ್ಣಿಗೆ ಸಿಕ್ಕಿಬಿದ್ದು, ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದರು. ಇದರ ಬೆನ್ನಲ್ಲೇ ಮೇಟಿ ಪ್ರಕರಣ ರಾಜ್ಯ ಸರ್ಕಾರವನ್ನೇ ಅಲ್ಲಾಡಿಸುವ ಮಟ್ಟಿಗೆ ಸದ್ದು ಮಾಡುತ್ತಿದೆ.
Advertisement