ಕುಮಾರಸ್ವಾಮಿ ಶ್ರೀಲಂಕಾಗೆ ಯಾಕೆ ಹೋಗಿದ್ದರು? ನನಗೆ ಹಲವು ರಹಸ್ಯಗಳು ತಿಳಿದಿವೆ: ರಮ್ಯಾ
ಮಂಡ್ಯ: ಮಾಜಿ ಸಂಸದೆ ರಮ್ಯಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ .ಡಿ ಕುಮಾರಸ್ವಾಮಿ ಅವರ ಮಾತಿನ ಸಮರ ತಾರಕಕ್ಕೇರಿದ್ದು ಪರಸ್ಪರ ಕೆಸರೆರೆಚಾಟ ಮುಂದುವರಿಸಿದ್ದಾರೆ.
ಪಂಚಾಯಿತಿ ಚುನಾವಣಾ ಪ್ರಚಾರ ವೇದಿಕೆಯನ್ನು ಇಬ್ಬರು ವಯಕ್ತಿಕವಾಗಿ ದೋಷಾರೋಪಣೆ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಎಚ್ಡಿಕೆ ರಮ್ಯಾಗೆ ರಾಜಕೀಯ ಗೊತ್ತಿಲ್ಲ. ಅವರು ಬಣ್ಣದ ಲೋಕದ ಹೆಣ್ಣು, ಪ್ರಾಮಾಣಿಕವಾಗಿ ನಡೆದುಕೊಂಡರೇ ಜನ ಗುರುತಿಸುತ್ತಾರೆ. ನಾಟಕಕ್ಕೆ ಬೆಲೆ ಕೊಡುವುದಿಲ್ಲ ಎಂದು ಹೇಳಿದ್ದ ಅವರು, ರಮ್ಯಾ ಲಂಡನ್ ಗೆ ಹೋಗಿದ್ಯಾಕೆ ಎಂದು ಪ್ರಶ್ನಿಸಿದ್ದರು.
ಎಚ್ ಡಿಕೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಮ್ಯಾ, ನಾನು ಲಂಡನ್ ಗೆ ಮಜಾ ಮಾಡಲು ಹೋಗಿರಲಿಲ್ಲ. ಅಧ್ಯಯನಕ್ಕಾಗಿ ತೆರಳಿದ್ದೆ. ಇದು ಕುಮಾರ ಸ್ವಾಮಿ ಅವರ ಅವಿವೇಕತನದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ನಾನು ಅಧ್ಯಯನಕ್ಕಾಗಿ ಲಂಡನ್ ಗೆ ಹೋಗಿದ್ದೆ. ಕುಮಾರ ಸ್ವಾಮಿ ಶ್ರೀಲಂಕಾಗೆ ಏಕೆ ಹೋಗಿದ್ದರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ರಮ್ಯಾ ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಬಳಿ ಬಿಎಂಡಬ್ಲ್ಯು, ಆಡಿ ಸೇರಿದಂತೆ ನಾಲ್ಕಾರು ಐಷಾರಾಮಿ ಕಾರುಗಳಿವೆ. ಮನೆಯಲ್ಲಿ ಪತ್ನಿ ರಾಧಿಕಾ ಮತ್ತು ಕುಮಾರಸ್ವಾಮಿ ಗೋಲ್ಡ್ ವಾಚ್ ಹಾಕಿಕೊಳ್ಳುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಬಗ್ಗೆ ಮಾತನಾಡುವ ನೈತಿಕತೆ ಕುಮಾರಸ್ವಾಮಿಗೆ ಇಲ್ಲ ಎಂದು ರಮ್ಯಾ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ