ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಪ್ರತ್ಯೇಕವಾಗಿ ಉಸ್ತುವಾರಿ ಸಚಿವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಗಡಿಭಾಗದ ಸಮಸ್ಯೆಗಳ ಬಗ್ಗೆ ಅಗಾಧ ಮಾಹಿತಿ ಹೊಂದಿರುವ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಬೆಳಗಾವಿ ಗಡಿ ವಿವಾದದ ಉಸ್ತುವಾರಿ ಸಚಿವರಾಗಿ ನೇಮಕ ಮಾಡುವ ಮೂಲಕ ಸರ್ಕಾರ ಮಹಾರಾಷ್ಟ್ರಕ್ಕೆ ತಿರುಗೇಟು ನೀಡಿದೆ. ದಶಕಗಳಿಂದ ನಡೆಯುತ್ತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸಮಸ್ಯೆ ಆಗಾಗ ತೀವ್ರಗೊಂಡು ಗಲಾಟೆ ನಡೆಯುತ್ತಿತ್ತು.
ಬೆಳಗಾವಿ ನಮ್ಮದು ಎಂದು ಮಹಾರಾಷ್ಟ್ರ ತಕರಾರು ತೆಗೆಯುತ್ತಲೇ ಬಂದಿದೆ. ಇದರ ನಡುವೆಯೇ ಮಹಾರಾಷ್ಟ್ರ ಸರ್ಕಾರ ಕಳೆದ ತಿಂಗಳು ಏಕಾಏಕಿ ಹೊಸ ಆದೇಶ ಹೊರಡಿಸಿ, ಗಡಿ ಸಮಸ್ಯೆ ನಿರ್ವಹಣೆಗೆಂದೇ ಒಬ್ಬರು ಸಚಿವರನ್ನು ನೇಮ ಮಾಡಿತ್ತು.
ಆದರೆ ಕರ್ನಾಟಕದಲ್ಲಿ ಮಾತ್ರ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬಿಟ್ಟರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸಮಸ್ಯೆ ಸ್ಪಂದಿಸಲು ವಿಶೇಷವಾಗಿ ಯಾವುದೇ ವ್ಯವಸ್ಥೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಪಾಟೀಲರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.