
ಬಾಗಲಕೋಟೆ: ಬರ ಪರಿಸ್ಥಿತಿ ನಿವಾರಣೆಗೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ ಅಂತ ಹೇಳಲ್ಲ, ಆದ್ರೆ ಕೇಳಿದಷ್ಟು ಹಣ ಕೊಡ್ಲಿಲ್ಲ! ಹೀಗೆಂದು ಅಸಮಾಧಾನ ಹೊರ ಹಾಕಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮುಂಗಾರು ಹಂಗಾಮಿನಲ್ಲಿ ರು,16 ಸಾವಿರ ಕೋಟಿ ಬೆಳೆ ನಷ್ಟವಾಗಿತ್ತು.
ನಾವು ಅಷ್ಟೊಂದು ಪ್ರಮಾಣದಲ್ಲಿ ಕೇಂದ್ರದ ನೆರವು ಕೇಳಲಿಲ್ಲ. ಬದಲಾಗಿ ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಅಧಿಕಾರಿಗಳು ರು. 2278 ಕೋಟಿ ಅಂದಾಜು ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ನೆರವು ಕೋರಿದ್ದರು.ಆದರೆ ಕೇಂದ್ರ ಸರ್ಕಾರ ರು. 1540 ಕೋಟಿ ಮಾತ್ರ ನೀಡಿದೆ. ಈ ಅನುದಾನವನ್ನು ರಾಜ್ಯದ ರೈತರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಚ್‍ಡಿಕೆಗೆ ಕಾಮನ್‍ಸೆನ್ಸ್ ಕಡಿಮೆ: ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂದು ಪ್ರತಿಪಕ್ಷಗಳು ಆರೋಪಿಸುತ್ತಿರುವುದು ಕೇವಲ ರಾಜಕೀಯ ಗಿಮಿಕ್. ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ, ಕಾಮಗಾರಿಗಳ ಉದ್ಘಾಟನೆಗೆ ಹೋಗುತ್ತಿರುವುದು ಚುನಾವಣೆಗಾಗಿ ಅಲ್ಲ. ಆರೋಪ ಮಾಡುವಾಗ ಎಚ್.ಡಿ. ಕುಮಾರಸ್ವಾಮಿ ತಾವು ಹಿಂದೆ ಮುಖ್ಯಮಂತ್ರಿ ಆಗಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕಿತ್ತು. ಕಾಮನ್ ಸೆನ್ಸ್ ಕಡಿಮೆ ಇರುವುದರಿಂದ ಈ ರೀತಿ ಮಾತನಾಡುತ್ತಾರೆಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಾಯಿ ಚಪಲದ ಮಾತು: ಉತ್ತರ ಕರ್ನಾಟಕ ಅಬಿವೃದ್ಧಿ ಆಗಿಲ್ಲ ಅನ್ನೋದು ಬಾಯಿ ಚಪಲದ ಮಾತು. ಸ್ವಾರ್ಥ ರಾಜಕಾರಣಕ್ಕಾಗಿ ಇಂಥದ್ದೊಂದು ಪ್ರಸ್ತಾಪ ಮಂಡಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅಭಿವೃದ್ಧಿ ವಿಚಾರದಲ್ಲಿ ತಾವೆಂದೂ ತಾರತಮ್ಯ ಮಾಡುವುದಿಲ್ಲ. ಪ್ರಾದೇಶಿಕ
ಅಸಮಾನತೆಯನ್ನು ಅಲ್ಲಗಳೆಯುವುದಿಲ್ಲ. ಇದನ್ನು ನಿವಾರಿಸುವ ನಿಟ್ಟಿನ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದರು. ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಗಾಗಿ ಆಗಮಿಸಿದ್ದ ಅವರು ಈ ವಿಚಾರ ತಿಳಿಸಿದರು.
Advertisement