ಜಾರ್ಜ್ ರಾಜಿನಾಮೆ ನೀಡೋವರೆಗೂ ಪ್ರತಿಭಟನೆ ಮಾಡಿ: ಶಾಸಕರಿಗೆ ಬಿಎಸ್ ವೈ

ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ವಿಧಾನಸಭೆಯ ಉಭಯ...
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ವಿಧಾನಸಭೆಯ ಉಭಯ ಸದನಗಳಲ್ಲೂ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ಡಿವೈಎಸ್ಪಿಯ ಆತ್ಮಹತ್ಯೆ ಪ್ರಕರಣವನ್ನೇ ಅಸ್ತ್ರ ಮಾಡಿಕೊಂಡಿರುವ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ರಾಜಿನಾಮೆ ಒತ್ತಾಯಿಸಿ ಬಿಜೆಪಿ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಪ್ರತಿಭಟನೆ ನಡೆಸುತ್ತಿದೆ. 
ಈ ಮಧ್ಯೆ ಜಾರ್ಜ್ ರಾಜಿನಾಮೆ ನೀಡುವವರೆಗೆ ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ನೀವು ನಿರಂತರ ಧರಣಿ ನಡೆಸಿ, ನಾನು ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ.
ಜಾರ್ಜ್ ರಾಜಿನಾಮೆ ನೀಡುವವರೆಗೆ ಪ್ರತಿಭಟನೆ ಮುಂದುವರೆಸಿ ಎಂದು ಶಾಸಕರಿಗೆ ಕರೆ ನೀಡಿರುವ ಬಿಎಸ್ ವೈ, ಅಗತ್ಯ ಬಿದ್ದರೆ ಅಹೋರಾತ್ರಿ ಪ್ರತಿಭಟನೆಯನ್ನೂ ಮಾಡಿ ಎಂದಿದ್ದಾರೆ. ಅಲ್ಲದೆ ಮಡಿಕೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಬಗ್ಗೆ ಇನ್ನು ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಬಿಎಸ್ ವೈ ತಿಳಿಸಿದ್ದಾರೆ.
ವಿಧಾನಸಭೆ ಮೊಗಸಾಲೆಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಔಪಚಾರಿಕ ಮಾತುಕತೆ ನಡೆಸಿದರು. ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವ ಬಗ್ಗೆ ಚರ್ಚೆ ನಡೆಸಿದರು.
ಕುಶಾಲನಗರದಲ್ಲಿ ತೀವ್ರ ಪ್ರತಿಭಟನೆ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತಂತೆ ಕಳೆದ 2 ದಿನಗಳಿಂದ ಮಡಿಕೇರಿಯ ಕುಶಾಲನಗರದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com