ಜಾರ್ಜ್ ರಾಜಿನಾಮೆ ಪಡೆಯುವುದು ಒಳ್ಳೆದು: ಹೈಕಮಾಂಡ್ ಗೆ ಹಿರಿಯ ಕಾಂಗ್ರೆಸ್ ನಾಯಕರ ಸಲಹೆ

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸದ್ಯ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಂದ ರಾಜಿನಾಮೆ...
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್
ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸದ್ಯ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಂದ ರಾಜಿನಾಮೆ ಪಡೆಯುವುದು ಒಳ್ಳೆದು ಎಂದು ರಾಜ್ಯದ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಸಲಹೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗಣಪತಿ ಆತ್ಮಹತ್ಯೆ ಪ್ರಕರಣದಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಪ್ರಕರಣವನ್ನು ಎಳೆದಷ್ಟು ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗುತ್ತಿದೆ. ರಾಜ್ಯದ ಜನತೆ ಸರ್ಕಾರದ ಧೋರಣೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.  ಹೀಗಾಗಿ ಹೈಕಮಾಂಡ್ ಈ ಕೂಡಲೇ ಮಧ್ಯಪ್ರವೇಶಿಸಿ ಜಾರ್ಜ್ ಅವರ ರಾಜಿನಾಮೆ ಪಡೆಯಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ. ಅಲ್ಲದೆ ಕೆಲವು ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಜಾರ್ಜ್ ಅವರು ಆತ್ಮಹತ್ಯೆ ಶರಣಾದ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಅವರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು, ತನಿಖೆ ಮುಗಿಯುವವರೆಗೂ ಅವರಿಗೆ ಮಂತ್ರಿಗಿರಿ ಬೇಡ. ಸರ್ಕಾರ ಮತ್ತು ಪಕ್ಷದ ಇಮೇಜ್ ಕಾಪಾಡಿಕೊಳ್ಳುವ ಅಗತ್ಯ ಇದೆ ಎಂದು ಹಿರಿಯ ನಾಯಕರು ಹೈಕಮಾಂಡ್ ಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಇಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಜಾರ್ಜ್ ಅವರು, ನಾನು ಅಧಿಕಾರಕ್ಕಾಗಿ ರಾಜಕೀಯ ಜೀವನಕ್ಕೆ ಬಂದಿಲ್ಲ. ನಾನು ಅಲ್ಪಸಂಖ್ಯಾತ ಎಂದು ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ. ಪ್ರಾಮಾಣಿಕವಾದ ಆಡಳಿತ ಮಾಡಿದ್ದೇನೆ. ಗಣಪತಿಗೆ ನಾನು ಯಾವುದೇ ಕಿರುಕುಳ ಕೊಟ್ಟಿಲ್ಲ. ಹಾಗಾಗಿ ನಮ್ಮ ನಾಯಕ ಸಿಎಂ ಸಿದ್ದರಾಮಯ್ಯ ಅವರು ಹೇಳಿದರೆ ಮಾತ್ರ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ಮಂಗಳೂರಲ್ಲಿ ನಡೆದ ಚರ್ಚ್ ದಾಳಿ ನಂತರ ನಾನು ಮಂಗಳೂರು, ಉಡುಪಿಗೆ ಭೇಟಿ ಕೊಟ್ಟಿದ್ದು ನಿಜ. ಆದರೆ ಆ ಸಂದರ್ಭದಲ್ಲಿ ಯಾರೂ ನನಗೆ ಗಣಪತಿ ವಿರುದ್ಧ ದೂರು ಕೊಟ್ಟಿಲ್ಲ ಎಂದು ಜಾರ್ಜ್ ಸಮಜಾಯಿಷಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com