ಗಣಪತಿ ಗದ್ದಲ: ವಿಧಾನಸಭೆ, ಪರಿಷತ್ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವ...
ವಿಧಾನಸೌಧ
ವಿಧಾನಸೌಧ
Updated on
ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸೋಮವಾರವೂ ಪ್ರತಿಭಟನೆ ಮುಂದೂವರೆಸಿದ್ದರಿಂದ ವಿಧಾನಸಭೆ ಹಾಗೂ ಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.
ಇಂದು ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ, ಜೆಡಿಎಸ್ ಸದಸ್ಯರು ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಿದರು.
ಬಳಿಕ ಕಲಾಪ ಆರಂಭಗೊಂಡಾಗಲೂ ವಿಪಕ್ಷಗಳ ವಿಧಾನಸಭೆಯ ಬಾವಿಗಿಳಿದು ಜಾರ್ಜ್ ರಾಜಿನಾಮೆಗೆ ಆಗ್ರಹಿಸಿದವು. ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಸಿಎಂ, ವಿಪಕ್ಷಗಳಿಗೆ ಕಾರ್ಯಾಂಗ, ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲ ಎಂದರು. ಈ ರೀತಿಯ ಪ್ರತಿಭಟನೆಯಿಂದ ಪ್ರಯೋಜನೆ ಆಗುವುದಿಲ್ಲ. ಪ್ರತಿಪಕ್ಷಗಳಿಗೆ ರಾಜ್ಯದ ಹಿತಾಸಕ್ತಿ ಮುಖ್ಯವಲ್ಲ, ಬರೇ ರಾಜಕಾರಣ, ಪ್ರಚಾರವಷ್ಟೇ ಮುಖ್ಯ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಒಬ್ಬ ವ್ಯಕ್ತಿ ಸಲುವಾಗಿ ಇಡೀ ಸದನವನ್ನು ಹಾಳು ಮಾಡುವ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾರ್ಜ್ ರಕ್ಷಣೆ ಮಾಡುವ ಮುಖ್ಯಮಂತ್ರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಗದ್ದಲ, ಕೋಲಾಹಲದ ನಡುವೆ ವಿಧಾನಸಭೆಯಲ್ಲಿ ಧನವಿನಿಯೋಗ ವಿಧೇಯಕವನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿ, ವಿಧೇಯಕಕ್ಕೆ ಒಪ್ಪಿಗೆ ಪಡೆದ ನಂತರ ಕಲಾಪವನ್ನು ಸಂಜೆ 4ಗಂಟೆಗೆ ಮುಂದೂಡಲಾಯಿತು. ಪುನಾ ಕಲಾಪ ಆರಂಭವಾದಗಲೂ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದರಿಂದ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
ಇನ್ನು ವಿಧಾನ ಪರಿಷತ್ ನಲ್ಲೂ ತನಿಖೆಯೇ ಆಗದೆ ರಾಜಿನಾಮೆ ನೀಡಿ ಎಂದು ಕೇಳುವುದು ಎಷ್ಟು ಸರಿ. ಪ್ರಜಾಪ್ರಭುತ್ವದಲ್ಲಿ ಯಾರೂ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸಭಾನಾಯಕ, ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಲು ಮುಂದಾದಾಗ ವಿಪಕ್ಷಗಳು ಅಡ್ಡಿಪಡಿಸಿದ ಘಟನೆ ನಡೆಯಿತು. ಪ್ರತಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
ಉಭಯ ಸದನಗಳ ಕಲಾಪ ಜುಲೈ 30ರವರೆಗೆ ನಡೆಯಬೇಕಾಗಿತ್ತು. ಆದರೆ ಗಣಪತಿ ಆತ್ಮಹತ್ಯೆ ಪ್ರಕರಣದ ಗದ್ದಲದಲ್ಲಿಯೇ ಕಲಾಪ 12 ದಿನಗಳ ಮೊದಲೇ ಅಂತ್ಯವಾದಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com