ಕಾಂಗ್ರೆಸ್'ನಲ್ಲಿ ಮುಂದುವರೆದ ಅತೃಪ್ತ ಶಾಸಕರ ಮನವೊಲಿಕೆ ಯತ್ನ

ಸಂಪುಟ ಪುನಾರಚನೆಯಿಂದಾಗಿ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಿರುಕನ್ನು ಸರಿಪಡಿಸಲು ನಾಯಕರ ಯತ್ನ ಮಂದುವರಿದಿದೆ...
ವಿಧಾನಸೌಧದಲ್ಲಿ ಮಂಡ್ಯ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್
ವಿಧಾನಸೌಧದಲ್ಲಿ ಮಂಡ್ಯ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್
Updated on: 

ಬೆಂಗಳೂರು: ಸಂಪುಟ ಪುನಾರಚನೆಯಿಂದಾಗಿ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಿರುಕನ್ನು ಸರಿಪಡಿಸಲು ನಾಯಕರ ಯತ್ನ ಮಂದುವರಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವಿನಿಂದ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಅಂಬರೀಷ್, ಶ್ರೀನಿವಾಸ ಪ್ರಸಾದ್ ಮತ್ತು ಖಮರುಲ್ಲ ಇಸ್ಲಾಂರೊಂದಿಗೆ ನಿನ್ನೆಯಷ್ಟೇ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತುಕತೆ ನಡೆಸಿದ್ದರು. ಇದರಂತೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಹೆಚ್. ಆಂಜನೇಯ ಅವರು ಕೂಡ ಶಾಸಕರ ಮನವೊಲಿಕೆಗೆ ಯತ್ನ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ದಿಗ್ವಿಜಯ್ ಸಿಂಗ್ ಅವರು ಕೂಡ ಇಂದು ನಗರಕ್ಕೆ ಆಗಮಿಸಲಿದ್ದು, ಭಿನ್ನ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.

ಅತೃಪ್ತ ಶಾಸಕರನ್ನು ಭೇಟಿ ಮಾಡಿ ನಂತರ ಮಾತನಾಡಿರುವ ದಿನೇಶ್ ಗುಂಡೂರಾವ್ ಅವರು, ಮಾತುಕತೆ ಫಲಪ್ರದಾಯವಾಗಿತ್ತು. ಕೆಲ ಶಾಸಕರು ಹೈ ಕಮಾಂಡ್ ನೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ. ಪಕ್ಷದಿಂದ ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಈ ವರೆಗೂ ಯಾರೊಬ್ಬರೂ ಪಕ್ಷ ಬಿಡುವ ಕುರಿತಂತೆ ಮಾತುಕತೆಗಳನ್ನಾಡಿಲ್ಲ. ಪಕ್ಷದಿಂದ ಯಾರೂ ಅತೃಪ್ತಗೊಂಡಿಲ್ಲ. ಸಂಪುಟ ಪುನಾರಚನೆಯಿಂದಾಗಿ ಬೇಸತ್ತಿರುವ ಕೆಲ ಶಾಸಕರು ಸಿದ್ಧರಾಮಯ್ಯ ಅವರ ವಿರುದ್ಧ ತಿರುಗಿಬಿದ್ದಿದ್ದಾರೆಂದು ಹೇಳಿದ್ದಾರೆ.

ಅತೃಪ್ತಗೊಂಡಿರುವ ಶಾಸಕರಿಂದ ಸಿದ್ದರಾಮಯ್ಯ ಅವರಿಗೆ ಯಾವುದೇ ಆಗ್ರಹಗಳ ಪಟ್ಟಿ ತಲುಪಿಲ್ಲ. ಭಿನ್ನ ಶಾಸಕರು ಮೊದಲು ಪ್ರತಿಯೊಬ್ಬರ ಬಳಿ ಮಾತುಕತೆ ನಡೆಸಬೇಕಿದೆ. ನಂತರ ತಮಗೆ ಏನು ಬೇಕೆಂಬುದನ್ನು ನಿರ್ಧರಿಸಬೇಕು. ನಂತರ ನಮ್ಮಿಂದ ಏನನ್ನು ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ನಿರ್ಧರಿಸುತ್ತೇನೆ. ಸಂಪುಟ ಪುನಾರಚನೆಯನ್ನು ಮೃದು ಧೋರಣೆಯಿಂದ ಮಾಡಲು ಸಾಧ್ಯವಿಲ್ಲ. ಇದನ್ನು ಶಾಸಕರು ಅರ್ಥಮಾಡಿಕೊಳ್ಳಬೇಕಿದೆ  ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಅಂಬರೀಶ್ ಅವರು ಹಿರಿಯ ನಾಯಕರು. ಕಟುವಾಗಿ ಮಾತುನಾಡುವುದು ಅವರ ಶೈಲಿ. ಅಂಬರೀಷ್ ಅವರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಮಂಡ್ಯ ಜಿಲ್ಲೆ ರಾಮನಗರದ ನೆರೆ ಜಿಲ್ಲೆಯಾಗಿದ್ದು, ರಾಮನಗರ ಜಿಲ್ಲೆಗೆ ಈಗಾಗಲೇ ಸಚಿವರಿದ್ದಾರೆ.  ಇದು ಅವರಿಗೂ ತಿಳಿದಿತ್ತು. ಹೀಗಾಗಿಯೇ ಅವರು ತಮ್ಮ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com