
ಹಾಸನ: ಸಚಿವ ಸ್ಥಾನದಿಂದ ಕೈಬಿಡಲಾಗಿರುವ ಅಂಬರೀಷ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರನ್ನು ಜೆಡಿಎಸ್ ಗೆ ಬರುವಂತೆ ಆಹ್ವಾನಿಸಿಲ್ಲ, ಅಂಬರೀಷ್ ಅವರಿಗೆ ರಾಜೀನಾಮೆ ನೀಡಬೇಡಿ ಎಂದು ಹಿರಿಯನಾಗಿ ಸಲಹೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಂಬರೀಷ್ ಮೂಲತಃ ಜೆಡಿಎಸ್‌ನವರು, ಶ್ರೀನಿವಾಸ್ ಪ್ರಸಾದ್ ನನ್ನ ಜೊತೆ ಕೆಲಸ ಮಾಡಿದ್ದಾರೆ. ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಹೇಳಿದ್ದೇನೆ ಆ ಪ್ರೀತಿಯಿಂದ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪುಟ ಪುನಾರಚನೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ, ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ರಾಜ್ಯ ರಾಜಕಾರಣ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಕಿಡಿ ಕಾರಿದರು. ವಿಧಾನಸೌಧದಲ್ಲಿ 40-50 ಫೈಲ್ ಗಳು ಇದ್ದಕ್ಕಿದ್ದ ಹಾಗೆ ನಾಪತ್ತೆ ಆಗುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದ್ದಾರೆ.
Advertisement