ಬಂಡಾಯ ಶಾಸಕರಿಗೆ ಸಿಎಂ ಔಷಧಿ: 2 ಶಾಸಕರಿಗೆ ಬಿಡಿಎ ಸದಸ್ಯತ್ವ ಸ್ಥಾನ

ಸಂಪುಟ ಪುನಾರಚನೆಯಿಂದಾಗಿ ಕಾಂಗ್ರೆಸ್ ನಲ್ಲಿ ಉಂಟಾಗಿದ್ದ ಭಿನ್ನಮತ ಗಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔಷಧಿ ನೀಡಿದ್ದು, ಅತೃಪ್ತಗೊಂಡಿದ್ದ ಇಬ್ಬರು ಶಾಸಕರಿಗೆ ಬಿಡಿಎ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಸಂಪುಟ ಪುನಾರಚನೆಯಿಂದಾಗಿ ಕಾಂಗ್ರೆಸ್ ನಲ್ಲಿ ಉಂಟಾಗಿದ್ದ ಭಿನ್ನಮತ ಗಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔಷಧಿ ನೀಡಿದ್ದು, ಅತೃಪ್ತಗೊಂಡಿದ್ದ ಇಬ್ಬರು ಶಾಸಕರಿಗೆ ಶನಿವಾರ ಬಿಡಿಎ ಸದಸ್ಯತ್ವ ಸ್ಥಾನ ನೀಡಿದ್ದಾರೆ.

ಶಾಸಕರ ಆಕ್ರೋಶವನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಿನ್ನಮತ ಶಮನಕ್ಕಾಗಿ ಅತೃಪ್ತ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಗಿರಿ ನೀಡುವ ತಂತ್ರವೊಂದನ್ನು ರೂಪಿಸಿದ್ದರು. ಇದರಂತೆ ಶನಿವಾರ ಈ ತಂತ್ರಕ್ಕೆ ಕಾರ್ಯಾರೂಪ ನೀಡಿರುವ ಅವರು, ತಮ್ಮದೇ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರಾದ ಭೈರತಿ ಬಸವರಾಜು ಮತ್ತು ಎಸ್.ಟಿ.ಸೋಮಶೇಖರ್ ಅವರಿಗೆ ಬಿಡಿಎ ನಾಮನಿರ್ದೇಶನ ಸದಸ್ಯತ್ವ ಸ್ಥಾನ ನೀಡಿದ್ದಾರೆ.

ಈ ಮೂಲಕ ಭಿನ್ನಮತ ಪಾಳೆಯದಲ್ಲಿ ಗುರ್ತಿಸಿಕೊಂಡಿರುವ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳನ್ನು ಮಾಡಿದ್ದಾರೆ. ಹಾಗೆಯೇ ಬಂಡಾಯ ಕೈಬಿಟ್ಟು ಬಂದವರಿಗೆ ಹುದ್ದೆ ಸಿಗುತ್ತದೆ ಎಂಬ ಸಂದೇಶವನ್ನೂ ಅತೃಪ್ತ ಶಾಸಕರಿಗೆ ನೀಡಿದ್ದಾರೆ.

ಎಸ್.ಎಂ.ಕೃಷ್ಣರನ್ನು ಭೇಟಿಯಾದ ಶ್ರೀನಿವಾಸ ಪ್ರಸಾದ್
ಅತೃಪ್ತರಾಗಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಶನಿವಾರ ಸಂಜೆ ಭೇಟಿಯಾಗಿ, ಪ್ರಸ್ತುತ ರಾಜ್ಯದಲ್ಲಿ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ಕೆಲ ದಿನಗಳಿಂದಾಗುತ್ತಿರುವ ಬೆಳವಣಿಗೆಗಳು ಎಸ್.ಎಂ.ಕೃಷ್ಣ ಅವರಿಗೆ ತಿಳಿಯಬೇಕೆಂಬುದು ನಮ್ಮ ಅನಿಸಿಕೆಯಾಗಿತ್ತು. ಸಿದ್ದರಾಮಯ್ಯ ಅವರು ಶಾಸಕರನ್ನು ಭೇಟಿಯಾಗದೆ, ಮಾತುಕತೆ ನಡೆಸದೆಯೇ ಯಾವ ರೀತಿಯಲ್ಲಿ ಸಂಪುಟ ಪುನಾರಚನೆ ಮಾಡಿದ್ದಾರೆಂಬುದನ್ನು ಅವರ ಗಮನಕ್ಕೆ ತಂದಿದ್ದೇವೆ. ಮುಂದಿನ ಚರ್ಚೆಗಳಿಗಾಗಿ ಮತ್ತೆ ಕೃಷ್ಣ ಅವರನ್ನು ಎರಡು ಅಥವಾ ಮೂರು ದಿನಗಳ ನಂತರ ಭೇಟಿಯಾಗುತ್ತೇವೆಂದು ಶ್ರೀನಿವಾಸ ಪ್ರಸಾದ್ ಅವರು ಹೇಳಿದ್ದಾರೆ.

ನಮ್ಮ ಪ್ರಮುಖ ಆಗ್ರಹ ರಾಜ್ಯದಲ್ಲಿ ನಾಯಕತ್ವ ಬದಲಾಗಬೇಕೆಂಬುದಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಏನು ಮಾಡುತ್ತಿದ್ದಾರೋ, ಅದು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ.

ಪಕ್ಷದ ಹೈ ಕಮಾಂಡ್ ರಾಜ್ಯ ಪರಿಸ್ಥಿತಿಯನ್ನು ಗಮನಿಸಿ, ಮಾಹಿತಿ ಪಡೆಯಬೇಕು. ರಾಜ್ಯದಲ್ಲಿನ ಪಕ್ಷದ ಹಲವಾರು ಶಾಸಕರು ನಾಯಕತ್ವ ಬದಲಾವಣೆಯಾಗಬೇಕೆಂದು ಹೇಳುತ್ತಿದ್ದಾರೆ. ಆದರೆ, ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ರಾಜ್ಯದಲ್ಲಿನ ನಮ್ಮ ಪಕ್ಷದಲ್ಲಿ ಉತ್ತಮ ನಾಯಕತ್ವದ ಕೊರತೆಯಿಲ್ಲ. ಶಾಸಕರಿಗೆ ಸದಸ್ಯತ್ವ ಸ್ಥಾನ ನೀಡಿರುವುದು ಬಂಡಾಯ ಶಮನವಾಗಲಿ ಎಂದಷ್ಟೇ. ಮುಂದಿನ ಬೆಳವಣಿಗೆಗಳ ಕುರಿತು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com