ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯದಲ್ಲಿ ಜೆಡಿಎಸ್ ಒಳಜಗಳ ರಮ್ಯಾಗೆ ವರದಾನ

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ನಟ ಹಾಗೂ ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಷ್ ಸಕ್ರಿಯ ರಾಜಕಾರಣದಿಂದ ದೂರ ...
ರಮ್ಯಾ
ರಮ್ಯಾ

ಮೈಸೂರು: ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ನಟ ಹಾಗೂ ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಷ್ ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿರುವುದು ಮಾಜಿ ಸಂಸದೆ ಹಾಗೂ ನಟಿ ರಮ್ಯಾಗೆ ವರದಾನವಾಗುತ್ತಿದೆ. ತಮ್ಮ ರಾಜಕೀಯ ಚಟುವಟಿಕೆಗಳನ್ನು ರಮ್ಯಾ ಮಂಡ್ಯಗೆ ಶಿಫ್ಟ್ ಮಾಡಿದ್ದಾರೆ.

ಮಂಡ್ಯದಲ್ಲಿ ಮನೆ ಮಾಡಿರುವ ರಮ್ಯಾ ದೀಪಾವಳಿಯಂದು ಗೃಹ ಪ್ರವೇಶ ಮಾಡಿ, ಮಂಡ್ಯದಲ್ಲಿ ಹೆಚ್ಚಾಗಿ ಓಡಾಡುತ್ತಿರುವುದು ಜೆಡಿಎಸ್ ನಾಯಕರು ಹುಬ್ಬೇರಿಸುವಂತೆ ಮಾಡಿದೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಎಐಸಿಸಿ ಮುಖಂಡರು ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರವನ್ನ ಪುನರ್ಚಿಂತಿಸುವಂತೆ ನಟ ಅಂಬರೀಷ್ ಅವರಿಗೆ ಮನವಿ ಮಾಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ನಟ ಅಂಬರೀಷ್ ಅವರಿಗೆ ಪಕ್ಷ ಸೇರುವಂತೆ ಜೆಡಿಎಸ್ ಬಹಿರಂಗ ಆಹ್ವಾನ ನೀಡಿದೆ, ಅಂಬರೀಷ್ ಜೆಡಿಎಸ್ ಸೇರಿದರೇ ಪಕ್ಷಕ್ಕೆ ಮತ್ತಷ್ಟು ಬಲ ಸಿಗುತ್ತದೆ ಎಂಬುದು ಜೆಡಿಎಸ್ ಲೆಕ್ಕಚಾರ. ಕೆಲವೊಂದು ಮೂಲಗಳ ಪ್ರಕಾರ ಅಂಬರೀಷ್ ಶ್ರೀರಂಗಪಟ್ಟಣ ದಿಂದ ಸ್ಪರ್ದಿಸುತ್ತಾರೆ ಎನ್ನಲಾಗಿದೆ. ಶಾಸಕ ರಮೇಶ್ ಬಂಡಿಸಿದ್ದೇಗೌಡ ಜೆಡಿಎಸ್ ತೊರೆಯುವ ಸಾಧ್ಯತೆ ಇರುವುದರಿಂದ ಆ ಕ್ಷೇತ್ರದಿಂದ ಅಂಬರೀಷ್ ಅವರನ್ನ ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸುತ್ತಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕೆ.ಆರ್ ಪೇಟೆ ಅಥವಾ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಲಿದ್ದಾರೆ ಎನ್ನಲಾಗುತ್ತಿದೆ, ಈ ಎಲ್ಲದರ ನಡುವೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲ ಪಡಿಸುವ ಹೊಣೆಗಾರಿಕೆ ರಮ್ಯಾ ಅವರ ಮೇಲಿದೆ,

ಕಳೆದ ಬಾರಿ ಎಂಪಿ ಚುನಾವಣೆಯಲ್ಲಿ 5 ಸಾವಿರ ಮತಗಳಿಂದ ಸೋತಿದ್ದು ಹಾಗೂ ಜೆಡಿಎಸ್ ಒಳಜಗಳ ರಮ್ಯಾ ಪಾಲಿಗೆ ವರದಾನವಾಗಲಿದೆ. ಮಳವಳ್ಳಿಯಲ್ಲಿ ಕಾಂಗ್ರೆಸ್ ಪ್ರತಿನಿಧಿಸುತ್ತಿರುವ ಪಿ.ಎಂ ನರೇಂದ್ರಸ್ವಾಮಿ ಬಿಟ್ಟರೇ ಮತ್ತೆಲ್ಲೂ ಪಕ್ಷವನ್ನ ಸಮರ್ಥವಾಗಿ ಸದೃಢಗೊಳಿಸುವ ವ್ಯಕ್ತಿಗಳು ಇಲ್ಲ. ಹೀಗಾಗಿ ಜಿಲ್ಲೆಯಲ್ಲಿ ಬಲಹೀನವಾಗಿರುವ ಪಕ್ಷವನ್ನು ಮತ್ತಷ್ಟು ಸಮರ್ಥಗೊಳಿಸಬೇಕಿದೆ.

ಒಂದು ವೇಳೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಿದರೇ ಕಾಂಗ್ರೆಸ್ ಮತ್ತಷ್ಟು ಬಲಹೀನಗೊಳ್ಳುತ್ತದೆ. ಹೀಗಾಗಿ ಒಕ್ಕಲಿಗರೇ ಆಗಿರುವ ರಮ್ಯಾ ಅವರನ್ನೇ ಮುಂಡೂಣಿಯಲ್ಲಿ ನಡೆಸಬೇಕು ಎಂಬುದು ಹಲವು ಕಾರ್ಯಕರ್ತರ ಅಭಿಪ್ರಾಯವಾಗಿದೆ, ಹೀಗಾಗಿ ರಮ್ಯ ಈಗಾಗಲೇ ಮಂಡ್ಯದಲ್ಲಿ ಹಲವು ಸಭೆ ಸಮಾರಂಭಗಳನ್ನ ನಡೆಸುತ್ತಿದ್ದಾರೆ.

ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸುತ್ತಿದ್ದಾರೆ. ಐನೂರು ಮತ್ತು ಸಾವಿರ ನೋಟು ನಿಷೇಧದ ನಂತರ ಅಂಚೆ ಕಚೇರಿ ಮತ್ತು ಬ್ಯಾಂಕ್ ಗಳಿಗೆ ತೆರಳಿ ಸಾಮಾನ್ಯ ಜನೆತೆಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜೊತೆಗೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ರಮ್ಯಾ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸುಮಾರು 1 ಗಂಟೆಗೂ ಹೆಚ್ಚು ಕಾಲ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com