

ಬೆಳಗಾವಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿ ಅದ್ಧೂರಿ ವಿವಾಹಕ್ಕೆ ಗೈರಾಗಿದ್ದ ಸಿಎಂ ಸಿದ್ದರಾಮಯ್ಯ, ತಮ್ಮ ಸಂಪುಟ ಸಹೋದ್ಯೋಗಿ ರಮೇಶ್ ಜಾರಕಿ ಹೊಳಿ ಅವರ ಪುತ್ರನ ವಿವಾಹದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಈ ವಿಷಯವನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ದುಬಾರಿ ಮದುವೆಯ ಕುರಿತು ನಾವೇ ಟೀಕಿಸಿ, ಈಗ ನಾವೇ ದುಬಾರಿ ಮದುವೆಯಲ್ಲಿ ಪಾಲ್ಗೊಳ್ಳುವುದು ಸರಿಯಲ್ಲವೆಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೋಕಾಕ್‌ನಲ್ಲಿ ನಡೆಯುತ್ತಿರುವ ತಮ್ಮ ಮಗನ ಮದುವೆ ಕಾರ್ಯಕ್ರಮಕ್ಕೆ ಸಚಿವ ರಮೇಶ್ ಜಾರಕಿಹೊಳಿ ಅವರು ಸಿಎಂ ಸೇರಿದಂತೆ ಸಂಪುಟ ಮಿತ್ರರಿಗೆ ಆಹ್ವಾನ ನೀಡಿದ್ದರು.
ಪಕ್ಷದ ತತ್ವ ಹಾಗೂ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ನಾನಂತೂ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.