

ಬೆಂಗಳೂರು: ರಾಜ್ಯ ಹೊತ್ತಿ ಉರಿಯಲು ಕಾರಣವಾಗಿದ್ದ ಕಾವೇರಿ ಗಲಾಟೆ ಹಿಂದೆ ಆರ್'ಎಸ್ಎಸ್ ಕೈವಾಡವಿದೆ ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ವಿರುದ್ಧ ಬಿಜೆಪಿ ಶನಿವಾರ ಕಿಡಿಕಾರಿದೆ.
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ರಾಜ್ಯವೇ ಹೊತ್ತು ಉರಿಯವಂತೆ ಮಾಡಿತ್ತು. ಪ್ರಮುಖವಾಗಿ ರಾಜಧಾನಿ ಬೆಂಗಳೂರಂತೂ ಅಕ್ಷರಶಃ ಬೆಂಕಿಯ ಕೆನ್ನಾಲಿಗೆಗೆ ನಲುಗಿತ್ತು. ಕಾವೇರಿ ಗಲಾಟೆ ಕುರಿತಂತೆ ಹೇಳಿಕೆ ನೀಡಿದ್ದ ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು, ಪ್ರತಿಭಟನೆ ಹಾಗೂ ಹಿಂಸಾಚಾರದ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ದ ಕೈವಾಡವಿರುವ ಶಂಕೆಗಳಿವೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ಕಾವೇರಿ ಗಲಾಟೆ ಹಿಂದೆ ಆರ್'ಎಸ್ಎಸ್ ಕೈವಾಡವಿದೆ ಎಂದು ಗೃಹ ಸಚಿವರು ಬೇಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಪರಮೇಶ್ವರ ಅವರು ಕೂಡಲೇ ಕ್ಷಮೆಯಾಚಿಸಬೇಕು. ಆರ್'ಎಸ್ಎಸ್ ದೇಶಭಕ್ತಿಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಕಾನೂನು, ಸುವ್ಯವಸ್ಥೆಯನ್ನು ಹಾಳು ಮಾಡುವ ಹಂತಕ್ಕೆ ಅಂದು ಎಂದಿಗೂ ಹೋಗುವುದಿಲ್ಲ. ಬೇರೆಯವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಗೃಹ ಸಚಿವರು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಿದೆ ಎಂದು ಹೇಳಿದ್ದಾರೆ.